‘ದಸರಾ ಉದ್ಘಾಟನೆ’ಗೆ ಸಿಎಂ ಡಿ.ಕೆ.ಶಿವಕುಮಾರ್ಗೆ ಆಹ್ವಾನ ನೀಡಿದ ಸಚಿವ ಡಾ.ಯತೀಂದ್ರ
ಬೆಂಗಳೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಖುದ್ದು ಭೇಟಿ ಮಾಡಿ ಅಧಿಕೃತವಾಗಿ ಆಹ್ವಾನ ನೀಡಿದರು.
ಗುರುವಾರ ಸಿಎಂ ನಿವಾಸದಲ್ಲಿ ಮೈಸೂರು ಜಿಲ್ಲಾಡಳಿತದ ನಿಯೋಗದೊಂದಿಗೆ ಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾದ ಡಾ.ಯತೀಂದ್ರ, ಈ ಬಾರಿಯ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಸಿದ್ಧತೆಗಳು, ವಿವಿಧ ಕಾರ್ಯಕ್ರಮಗಳ ಆಯೋಜನೆ ಹಾಗೂ ಪೂರ್ವಭಾವಿ ಕ್ರಮಗಳ ಕುರಿತು ಸಮಾಲೋಚನೆ ನಡೆಸಿದರು.
ದಸರಾ ಮಹೋತ್ಸವವನ್ನು ಅರ್ಥಪೂರ್ಣವಾಗಿ ಹಾಗೂ ವೈಭವದಿಂದ ಆಚರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕೈಗೊಂಡಿರುವ ಸಿದ್ಧತೆಗಳ ಕುರಿತು ಸಿಎಂಗೆ ಮಾಹಿತಿ ನೀಡಲಾಯಿತು. ಈ ವೇಳೆ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ಜಿ.ಪಂ. ಸಿಇಓ ಯುಕೇಶ್ ಕುಮಾರ್, ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಸೇರಿದಂತೆ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.