ಸಾಂದರ್ಭಿಕ ಚಿತ್ರ
ಬೆಂಗಳೂರು : ಖೋಟಾ ನೋಟುಗಳನ್ನು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಹೊರರಾಜ್ಯದ ಏಳು ಮಂದಿ ಆರೋಪಿಗಳನ್ನು ಚಾಮರಾಜಪೇಟೆ ಠಾಣೆಯ ಪೊಲೀಸರು ಬಂಧಿಸಿದ್ದು, ಒಟ್ಟು 21,68,500 ರೂ. ಮೌಲ್ಯದ 500 ರೂ. ಮುಖಬೆಲೆಯ 4,337 ನೋಟುಗಳು, ಕಾರು, ಮೊಬೈಲ್ ಫೋನ್‍ಗಳು ಸೇರಿ ಇತರೆ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ತಮಿಳುನಾಡು ನಿವಾಸಿಗಳಾದ ಮುರುಗನ್(52), ಗೋವಿಂದನ್(43), ಬರ್ಕತ್(38), ಶರವಣನ್(47) ಮತ್ತು ತೆಲಂಗಾಣ ನಿವಾಸಿಗಳಾದ ಸತ್ಯಂ(47), ಲಕ್ಷ್ಮಣ್(46) ಹಾಗೂ ಕೃಷ್ಣ(43) ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ.
ಆರೋಪಿಗಳು ಮೈಸೂರು ರಸ್ತೆ ಪ್ರೈ ಓವರ್ ಡೌನ್‍ಯಾಂಪ್ ಬಳಿ ಇರುವ ಪೆಟ್ರೋಲ್ ಬಂಕ್‍ವೊಂದರ ಹತ್ತಿರ ಕಾರ್‍ವೊಂದರಲ್ಲಿ ಖೋಟಾ ನೋಟುಗಳನ್ನು ಚಲಾವಣೆ ಮಾಡುತ್ತಿದ್ದಾರೆ ಎಂದು ಚಾಮರಾಜಪೇಟೆ ಠಾಣೆಯ ಪೊಲೀಸರಿಗೆ ಮಾಹಿತಿ ಬಂದಿತ್ತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಆರೋಪಿಗಳ ವಶದಲ್ಲಿದ್ದ 500 ರೂ. ಮುಖಬೆಲೆಯ 3 ಸಾವಿರ ಖೋಟಾ ನೋಟುಗಳು, ಕೃತ್ಯಕ್ಕೆ ಬಳಸಿದ್ದ 1 ಕಾರು ಹಾಗೂ 2 ಮೊಬೈಲ್ ಫೋನ್‍ಗಳನ್ನು ವಶಕ್ಕೆ ಪಡೆದಿದ್ದಾರೆ.
ಸುಲಭವಾಗಿ ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಇತರೆ 9 ಸಹಚರರೊಂದಿಗೆ ಸೇರಿಕೊಂಡು ಖೋಟಾ ನೋಟುಗಳನ್ನು ಮುದ್ರಸಿ ಚಲಾವಣೆ ಮಾಡುತ್ತಿದ್ದುದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.
ಆರೋಪಿಗಳು ನೀಡಿದ ಮಾಹಿತಿಯ ಮೇರೆಗೆ ತಮಿಳುನಾಡಿನ ಚೆನ್ನೈನಲ್ಲಿ ಇಬ್ಬರು ಆರೋಪಿಗಳನ್ನು ಎರಡು ಮೊಬೈಲ್ ಫೋನ್ ಸಮೇತ ಬಂಧಿಸಲಾಗಿದೆ. ಹಾಗೆಯೇ ಈ ಪೈಕಿ ಆರೋಪಿಯೋರ್ವನ ವಾಸದ ಮನೆಯಿಂದ 500 ರೂ. ಮುಖಬೆಲೆಯ 1,337 ಖೋಟಾ ನೋಟುಗಳು ಹಾಗೂ ಖೋಟಾ ನೋಟುಗಳನ್ನು ಮುದ್ರಿಸಲು ಬಳಸುತ್ತಿದ್ದ ಕಂಪ್ಯೂಟರ್, ಲ್ಯಾಪ್ ಟ್ಯಾಪ್, ಲ್ಯಾಮಿನೇಟರ್, ಕಲರ್ ಪ್ರಿಂಟರ್, ಕಟಿಂಗ್ ಮೆಷಿನ್, ಹಾಲೋಗ್ರಾಂ, ಜೆರಾಕ್ಸ್ ಮೆಷಿನ್ ಹಾಗೂ ಇತರೆ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇನ್ನು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಿಂದ ಮೂವರು ಆರೋಪಿಗಳನ್ನು 4 ಮೊಬೈಲ್ ಫೋನ್ ಸಮೇತ ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.