‘ಸೋಲಾರ್ ಕ್ಷೇತ್ರದಲ್ಲಿ ಹೂಡಿಕೆ’ | ತುಮಕೂರಿನಲ್ಲಿ 5 ಸಾವಿರ ಕೋಟಿ ರೂ.ಹೂಡಿಕೆಗೆ ರೆನೈಸಾನ್ಸ್ ಆಸಕ್ತಿ : ಸಚಿವ ಎಂ.ಬಿ.ಪಾಟೀಲ್
ಬೆಂಗಳೂರು : 2025ರಲ್ಲಿ ನಡೆದಿದ್ದ ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಘೋಷಿಸಿದ್ದಂತೆ ಭಾರತ-ಅಮೆರಿಕ ಪಾಲುದಾರಿಕೆಯುಳ್ಳ ರೆನೈಸಾನ್ಸ್ ಸೋಲಾರ್ ಅಂಡ್ ಎಲೆಕ್ಟ್ರಾನಿಕ್ ಮೆಟೀರಿಯಲ್ಸ್ ಕಂಪನಿಯು ತುಮಕೂರಿನ ಚೆನ್ನೈ-ಬೆಂಗಳೂರು ಇಂಡಸ್ಟ್ರಿಯಲ್ ಕಾರಿಡಾರ್(ಸಿಬಿಐಸಿ) ಪ್ರದೇಶದಲ್ಲಿ 5ಸಾವಿರ ಕೋಟಿ ರೂ.ಬಂಡವಾಳ ಹೂಡಲು ಆಸಕ್ತಿ ತೋರಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಗುರುವಾರ ಇಲ್ಲಿನ ಖನಿಜ ಭವನದಲ್ಲಿ ತಮ್ಮನ್ನು ರೆನೈಸಾನ್ಸ್ ಕಂಪೆನಿಯ ಅಧ್ಯಕ್ಷ ಮತ್ತು ಸಿಇಒ ಡಾ.ಮಿಲಿಂದ್ ಎಸ್. ಕುಲಕರ್ಣಿ ಜತೆ ಸಮಾಲೋಚನೆ ನಡೆಸಿದ ಬಳಿಕ ಮಾತನಾಡಿದ ಅವರು, ಕೆಂಪೆನಿಯು ಸೋಲಾರ್ ಕ್ಷೇತ್ರದಲ್ಲಿ ಸಿಂಗಲ್ ಕ್ರಿಸ್ಟಲ್ ಸಿಲಿಕಾನ್ ಮತ್ತು ವೇಫರ್ ತಯಾರಿಕೆಯಲ್ಲಿ ಹೆಸರು ಮಾಡಿದೆ. ಅದು ಸಿಬಿಐಸಿ ಪ್ರದೇಶದಲ್ಲಿ 5 ಗಿಗಾವ್ಯಾಟ್ ಸಾಮಥ್ರ್ಯದ ಸೋಲಾರ್ ಇನ್-ಗಾಟ್ ಮತ್ತು ವೇಫರ್ ತಯಾರಿಕೆ ಘಟಕ ಸ್ಥಾಪಿಸಲು 100ಎಕರೆ ಜಾಗ ಕೇಳಿದೆ. ಕಂಪನಿಯ ಉಳಿದ ಬೇಡಿಕೆಗಳನ್ನು ಕುರಿತು ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದು ಹೇಳಿದರು.
ರೆನೈಸಾನ್ಸ್ ಕಂಪೆನಿಯು ತಂತ್ರಜ್ಞರೇ ಸೇರಿಕೊಂಡು ಆರಂಭಿಸಿರುವ ಉದ್ಯಮವಾಗಿದ್ದು, ಚೆನ್ನೈನಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿದೆ. ಉದ್ದೇಶಿತ ಸ್ಥಾವರಕ್ಕೆ ಅದು 80 ಮೆ.ವ್ಯಾ.ವಿದ್ಯುತ್ ಮತ್ತು 1ಕೋಟಿ ಎಂಎಲ್‍ಡಿ ನೀರು ಬೇಕಾಗುತ್ತದೆ ಎಂಬ ಎರಡು ಪ್ರಮುಖ ಅಗತ್ಯಗಳನ್ನು ನಮ್ಮ ಗಮನಕ್ಕೆ ತರಲಾಗಿದೆ. ಇವುಗಳನ್ನು ಸಕಾರಾತ್ಮಕವಾಗಿ ಪರಿಗಣಿಸಲಾಗುವುದು. ಎಲ್ಲವೂ ನಿರೀಕ್ಷೆಯಂತೆ ನಡೆದರೆ 2028ರ ಮಧ್ಯ ಭಾಗದ ವೇಳೆಗೆ ಕಂಪೆನಿಯು ತನ್ನ ತಯಾರಿಕಾ ಚಟುವಟಿಕೆ ಆರಂಭಿಸಲಿದೆ ಎಂದು ಅವರು ತಿಳಿಸಿದರು.
ಕಂಪೆನಿಯು ರಾಜ್ಯ ಸರಕಾರದ ಕಡೆಯಿಂದ ವಿಶೇಷ ಪ್ರೋ ತ್ಸಾಹನಾ ಭತ್ಯೆಗೂ ಮನವಿ ಮಾಡಿಕೊಂಡಿದೆ. ಈ ಕುರಿತು ಉನ್ನತ ಮಟ್ಟದಲ್ಲಿ ಚರ್ಚೆ ಪ್ರಗತಿಯಲ್ಲಿದೆ ಎಂದು ಪಾಟೀಲ್ ನುಡಿದರು. ಈ ವೇಳೆ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಖುಷ್ಬೂ ಗೋಯಲ್ ಮತ್ತು ಕೆಐಎಡಿಬಿ ಸಿಇಒ ಗೋವಿಂದ ರೆಡ್ಡಿ ಉಪಸ್ಥಿತರಿದ್ದರು.