×
Ad

ಅಲೆಮಾರಿ ಸಮುದಾಯಕ್ಕೆ ಶೇ.1ರಷ್ಟು ಪ್ರತ್ಯೇಕ ಮೀಸಲಾತಿ; ರಾಜ್ಯ ಸರಕಾರದಿಂದ ತಾತ್ವಿಕ ಒಪ್ಪಿಗೆ

Update: 2025-10-15 19:31 IST

ಬೆಂಗಳೂರು, ಅ.15: ಪರಿಶಿಷ್ಟ ಜಾತಿಯ ಒಳಮೀಸಲಾತಿಯಲ್ಲಿ ಅತ್ಯಂತ ಹಿಂದುಳಿದ ಅಲೆಮಾರಿ ಸಮುದಾಯಕ್ಕೆ ಶೇ.1ರಷ್ಟು ಮೀಸಲಾತಿ ನೀಡಲು ಮತ್ತು ಪ್ರತ್ಯೇಕ ಅಭಿವೃದ್ಧಿ ನಿಗಮ ಹಾಗೂ ವಿಶೇಷ ಆರ್ಥಿಕ ಪ್ಯಾಕೇಜ್‍ಗೆ ರಾಜ್ಯ ಸರಕಾರದಿಂದ ತಾತ್ವಿಕ ಒಪ್ಪಿಗೆ ದೊರಕಿದೆ ಎಂದು ಮೂಲಗಳು ತಿಳಿಸಿವೆ.

ಬುಧವಾರ ಹೊಸದಿಲ್ಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಅಲೆಮಾರಿ ಸಮುದಾಯದ ನಾಯಕರೊಂದಿಗೆ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮಧ್ಯಸ್ತಿಕೆಯಲ್ಲಿ ಮಾತುಕತೆ ನಡೆದಿದೆ. ದಿಲ್ಲಿಯಲ್ಲಿ ನಡೆದ ಸತತ ಎರಡು ವಾರಗಳ ಹೋರಾಟದ ಪ್ರತಿಫಲವಾಗಿ ಅಲೆಮಾರಿ ಸಮುದಾಯಕ್ಕೆ ಭರವಸೆ ಸಿಕ್ಕಿದ್ದು, ಈ ಪ್ರಕ್ರಿಯೆ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲು ದೀಪಾವಳಿ ಮುಗಿದ ಕೂಡಲೇ ಸಿಎಂ ಸಿದ್ದರಾಮಯ್ಯ, ರಣದೀಪ್ ಸಿಂಗ್ ಸುರ್ಜೇವಾಲ, ಡಾ.ಮಹದೇವಪ್ಪರ ಸಮ್ಮುಖದಲ್ಲಿ ಅಲೆಮಾರಿ ಮುಖಂಡರ ಜೊತೆ ಮಾತುಕತೆ ನಡೆಯಲಿದೆ.

ಮಂಗಳವಾರ(ಅ.14) ಚಂಡೀಘಡದಲ್ಲಿ ರಾಹುಲ್ ಗಾಂಧಿಯನ್ನು ಭೇಟಿಯಾಗಿದ್ದ ಬಿ.ಕೆ.ಹರಿಪ್ರಸಾದ್, ಸಮಸ್ಯೆಯನ್ನು ಬಗೆಹರಿಸಲು ದಿಲ್ಲಿಯ ಎಐಸಿಸಿ ಕಚೇರಿಗೆ ವಾಪಸ್ಸಾಗಿ, ಎಐಸಿಸಿ ಪ್ರಭಾರ ಕಾರ್ಯದರ್ಶಿ ಆರತಿ ಕೃಷ್ಣರನ್ನು ಒಳಗೊಂಡಂತೆ ಬೆಳಗ್ಗೆ 11 ಗಂಟೆಗೆ ಅಲೆಮಾರಿ ಪ್ರತಿನಿಧಿ ತಂಡವನ್ನು ಮಾತುಕತೆಗೆ ಕರೆದಿದ್ದರು.

ಅಲೆಮಾರಿ ಸಮುದಾಯದ ನಿಯೋಗವು ತನ್ನ ಹಕ್ಕೊತ್ತಾಯದಲ್ಲಿ ಪರಿಶಿಷ್ಟರ ‘ಎ’ ಪ್ರವರ್ಗದಲ್ಲಿ ಶೇ.1ರಷ್ಟು ಪ್ರತ್ಯೇಕ ಮೀಸಲಾತಿ, 49 ಅಲೆಮಾರಿ ಸಮುದಾಯಗಗಳಿಗೆ ಸೀಮಿತವಾದ ಪ್ರತ್ಯೇಕ ಅಭಿವೃದ್ಧಿ ನಿಗಮ ಹಾಗೂ ಅಲೆಮಾರಿ ಸಮುದಾಯದ ಅಭಿವೃದ್ಧಿಗೆ ಪರಿಣಾಮಕಾರಿ ಪ್ಯಾಕೇಜ್ ನೀಡಬೇಕು ಎಂದು ಮನವಿ ಮಾಡಿದರು.

ಬಿ.ಕೆ.ಹರಿಪ್ರಸಾದ್ ಪ್ರತಿಕ್ರಿಯಿಸಿ, ಇಂದು ದಿಲ್ಲಿಗೆ ಬರಬೇಕಿದ್ದ ರಾಹುಲ್ ಗಾಂಧಿ ಅವರ ತಾಯಿಗೆ ಆರೋಗ್ಯ ಏರುಪೇರಾಗಿದ್ದರಿಂದ ಶಿಮ್ಲಾಗೆ ತೆರಳಿದ್ದಾರೆ. ಸಮಸ್ಯೆಯನ್ನು ಬಗೆಹರಿಸುವಂತೆ ನಮಗೆ ಸೂಚಿಸಿದ್ದಾರೆ. ವಿಳಂಬ ಮಾಡುವುದು ಬೇಡ, ಸಮಸ್ಯೆ ಬಗೆಹರಿಯದಿದ್ದರೆ ರಾಹುಲ್ ಗಾಂಧಿ ಜೊತೆ ಸಭೆ ನಿಗಧಿ ಮಾಡೋಣ ಎಂದು ಭರವಸೆ ನೀಡಿ, ಕೆ.ರಾಜು, ಗುರುದೀಪ್ ಸಪ್ಪಾಲ್, ವೇಣುಗೋಪಾಲ್, ಸುರ್ಜೇವಾಲ ಹಾಗೂ ಡಾ.ಮಹದೇವಪ್ಪ ದೂರವಾಣಿ ಮೂಲಕ ಸಮಾಲೋಚನೆ ನಡೆಸಿದರು.

ಅಲೆಮಾರಿ ಸಮುದಾಯಕ್ಕೆ ಶೇ.1ರಷ್ಟು ಪ್ರತ್ಯೇಕ ಮೀಸಲಾತಿ ನೀಡಲು ರಾಜ್ಯ ಸರಕಾರಕ್ಕೆ ತಾತ್ವಿಕ ಒಪ್ಪಿಗೆ ಇದೆ. ಇದರ ಪ್ರಕ್ರಿಯೆ ಹೇಗೆ ಎಂಬ ಕುರಿತು ಮಾತ್ರ ಸಭೆಯಲ್ಲಿ ಚರ್ಚಿಸಿಕೊಳ್ಳಬೇಕಿದೆ. ವಿಶೇಷ ಪ್ಯಾಕೇಜ್ ಮತ್ತು 49 ಅಲೆಮಾರಿ ಸಮುದಾಯಗಗಳಿಗೇ ಸೀಮಿತವಾದ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಲು ಸರಕಾರ ಬದ್ಧವಿದೆ. ಇವೆಲ್ಲವುಗಳ ಕುರಿತು ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲು ಎಐಸಿಸಿ ಕಡೆಯಿಂದ ಕೆ.ರಾಜು, ಸುರ್ಜೇವಾಲ ಇರುವಂತೆ ರಾಜ್ಯ ಸರಕಾರದ ಜೊತೆ ದೀಪಾವಳಿ ನಂತರದ ಮೊದಲ ವಾರದಲ್ಲೇ ಸಭೆ ನಿಗದಿ ಮಾಡಲಾಗುತ್ತದೆ ಎಂದು ಬಿ.ಕೆ.ಹರಿಪ್ರಸಾದ್ ಭರವಸೆ ನೀಡಿದರು.

ಅಲೆಮಾರಿ ಸಮುದಾಯ ಮುಖಂಡರಾದ ಎ.ಎಸ್.ಪ್ರಭಾಕರ್, ಮಂಜುನಾಥ್ ದಾಯತ್ಕರ್, ಬಸವರಾಜ್ ನಾರಾಯಣಕರ್, ಚಾವಡಿ ಲೋಕೇಶ್, ಮಂಡ್ಯ ರಾಜಣ್ಣ, ಸಂದೀಪ್ ಕುಮಾರ್ ದಾಸರ್, ಶರಣಪ್ಪ ಚನ್ನದಾಸರ್, ಸಿಂದೋಳು ಸಮುದಾಯದ ಹನುಮಂತು, ಒಳಮೀಸಲಾತಿ ಹೋರಾಟ ಸಮಿತಿಯ ಸಂಚಾಲಕ ಕರಿಯಪ್ಪ ಗುಡಿಮನಿ, ಕರ್ನಾಟಕ ಜನಶಕ್ತಿಯ ಅಧ್ಯಕ್ಷ ನೂರ್ ಶ್ರೀಧರ್ ಹಾಗೂ ಎದ್ದೇಳು ಕರ್ನಾಟಕದ ತಾರಾ ರಾವ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

‘ನಿಯೋಗದ ಜೊತೆ ದೂರವಾಣಿಯಲ್ಲಿ ಮಾತನಾಡಿದ ಸಚಿವ ಡಾ.ಮಹದೇವಪ್ಪ ಅವರು, ಹೋರಾಟಗಾರರು ದಿಲ್ಲಿಯಿಂದ ವಾಪಾಸ್ ಕರ್ನಾಟಕಕ್ಕೆ ಬನ್ನಿ. ಅಲೆಮಾರಿ ಸಮುದಾಯಗಳ ಸಮಸ್ಯೆ ಬಗೆಹರಿಸಿಕೊಡುತ್ತೇವೆಂದು ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿ ಕೈಗೊಂಡಿದ್ದ ಧರಣಿ ಅಂತ್ಯಗೊಳಿಸಲು ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟ ತೀರ್ಮಾನಿಸಿದೆ. ಸರಕಾರ ಹಾಗೂ ಎಐಸಿಸಿ ಮುಖಂಡರು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆಂಬ ವಿಶ್ವಾಸವಿದೆ. ಒಂದು ವೇಳೆ ನಮ್ಮ ನಿರೀಕ್ಷೆ ಹುಸಿಯಾದರೆ, ಮತ್ತೆ ದಿಲ್ಲಿಗೆ ಬರುವುದು ಖಚಿತ’ ಎಂದು ಮುಖಂಡರು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News