×
Ad

ಬೆಂಗಳೂರು | ನ.17ರಿಂದ ‘ಕಡಲೇಕಾಯಿ ಪರಿಷೆ’

Update: 2025-10-23 19:16 IST

ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.23: ಬಸವನಗುಡಿಯ ದೊಡ್ಡಗಣಪತಿ ದೇವಸ್ಥಾನದಲ್ಲಿ ನ.17ರಿಂದ 5 ದಿನಗಳ ಕಾಲ ಕಡಲೇಕಾಯಿ ಪರಿಷೆ ನಡೆಯಲಿದೆ ಎಂದು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಗುರುವಾರ ಪರಿಷೆ ಕುರಿತು ಶಾಸಕರು, ಅಧಿಕಾರಿಗಳು ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಜತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಡಲೇಕಾಯಿ ಪರಿಷೆಗೆ 400 ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ ಎಂಬುದು ಜನರ ಅಭಿಪ್ರಾಯವಾಗಿದ್ದು, 116 ವರ್ಷಗಳಿಂದ ಅಧಿಕೃತವಾಗಿ ನಡೆಯುತ್ತಿದೆ. ಅಗಾಧ ಐತಿಹಾಸಿಕ ಹಿನ್ನೆಲೆ ಹೊಂದಿರುವ ಪರಿಷೆಯ ಉದ್ಘಾಟನೆ ನ.17ರ ಬೆಳಗ್ಗೆ 10 ಗಂಟೆಗೆ ನಡೆಯಲಿದೆ ಎಂದರು.

ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರನ್ನು ಆಹ್ವಾನಿಸಲು ತೀರ್ಮಾನಿಸಲಾಗಿದೆ. ಜತೆಗೆ, 21 ಹಸುಗಳಿಗೆ ಪೂಜೆ ಸಲ್ಲಿಸಿ, ಹುಲ್ಲು ಹಾಕುವುದರ ಮೂಲಕ ಪರಿಷೆ ಉದ್ಘಾಟಿಸಲು ಸಭೆ ನಿರ್ಧರಿಸಿದೆ. ಹಿಂದಿನ ವರ್ಷ 5 ಲಕ್ಷಕ್ಕೂ ಹೆಚ್ಚು ಜನರು ಪರಿಷೆಯಲ್ಲಿ ಭಾಗಿಯಾಗಿದ್ದು, ಈ ಭಾರಿಯೂ ಹೆಚ್ಚಿನ ಸಂಖ್ಯೆಯ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಆದಕಾರಣ, ಹೆಚ್ಚಿನ ಭದ್ರತೆ ಒದಗಿಸಲು ಸೂಚಿಸಿದ್ದು, ಏಳು ದಿನಗಳ ಕಾಲ ಸಂಪೂರ್ಣವಾಗಿ ವಾಹನ ಸಂಚಾರಕ್ಕೆ ನಿರ್ಬಂಧವಿರಲಿದೆ ಎಂದು ಅವರು ಹೇಳಿದರು.

‘ತುರ್ತು ಚಿಕಿತ್ಸೆ ವಾಹನದ ವ್ಯವಸ್ಥೆ, ಅಗ್ನಿಶಾಮಕ ವಾಹನ ನಿಯೋಜನೆ, ವಿದ್ಯುತ್ ಅಲಂಕಾರ, ಕುಡಿಯುವ ನೀರು, ಸಿಸಿಟಿವಿ ಅಳವಡಿಕೆ, ಕಸದ ನಿರ್ವಹಣೆ ಹಾಗೂ 10 ಇ-ಟಾಯ್ಲೆಟ್ ವ್ಯವಸ್ಥೆ ಮಾಡಲು ಹಾಗೂ ದಿನದ 24 ಗಂಟೆಯೂ ಸ್ವಚ್ಛ ಶೌಚಾಲಯ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗಿದೆ. ಪರಿಷೆಯಲ್ಲಿ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳೂ ಜರುಗಲಿವೆ ಎಂದು ರಾಮಲಿಂಗಾರೆಡ್ಡಿ ಮಾಹಿತಿ ನೀಡಿದರು.

ಪ್ಲಾಸ್ಟಿಕ್ ರಹಿತ ಪರಿಷೆ: ‘ಈ ಬಾರಿಯ ಕಡಲೇಕಾಯಿ ಪರಿಷೆಯಲ್ಲಿ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಸಲಾಗಿದ್ದು, ಅಂಗಡಿಯವರಾಗಲೀ, ಫುಡ್‍ಕೋರ್ಟ್ ನವರಾಗಲಿ, ಪ್ಲಾಸ್ಟಿಕ್ ಕವರ್ ಬಳಕೆ ಮಾಡಿದ್ದಲ್ಲಿ ಅಂತಹ ಅಂಗಡಿಗಳನ್ನು ತೆರವುಗೊಳಿಸಲಾಗುತ್ತದೆ. ಗ್ರಾಹಕರು ಸಹ ಪ್ಲಾಸ್ಟಿಕ್ ಕವರ್ ಬದಲಾಗಿ ಪೇಪರ್ ಕವರ್ ಅಥವಾ ಬಟ್ಟೆಯ ಕೈಚೀಲವನ್ನು ತರಬೇಕು’

ರಾಮಲಿಂಗಾರೆಡ್ಡಿ, ಮುಜರಾಯಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News