×
Ad

ವೈದ್ಯಕೀಯ: ಛಾಯ್ಸ್-2 ಅಭ್ಯರ್ಥಿಗಳಿಗೆ ಮುಂಗಡ ಶುಲ್ಕ ಪಾವತಿಯಲ್ಲಿ ಬದಲಾವಣೆ

Update: 2025-08-14 22:21 IST

ಬೆಂಗಳೂರು, ಆ.14 : ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಹೋಮಿಯೋಪಥಿ ಕೋರ್ಸ್‍ನ ಮೊದಲ ಸುತ್ತಿನ ಸೀಟು ಹಂಚಿಕೆಗೆ ಛಾಯ್ಸ್ ದಾಖಲಿಸುವ ಪ್ರಕ್ರಿಯೆ ಗುರುವಾರದಿಂದ ಆರಂಭವಾಗಿದ್ದು, 12 ಲಕ್ಷ ರೂ.ಗಿಂತ ಹೆಚ್ಚಿನ ಕೋರ್ಸ್ ಶುಲ್ಕದ ಸೀಟು ಸಿಕ್ಕಿ, ಛಾಯ್ಸ್-2 ಆಯ್ಕೆ ಮಾಡಿಕೊಳ್ಳುವ ಅಭ್ಯರ್ಥಿಗಳಿಗೆ ಪೂರ್ಣ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.

ಈ ಸಂಬಂಧ ಪ್ರಕಟನೆ ಹೊರಡಿಸಿರುವ ಅವರು, ಇದುವರೆಗೂ ಛಾಯ್ಸ್-2 ದಾಖಲಿಸುವ ವೈದ್ಯಕೀಯ ಅಭ್ಯರ್ಥಿಗಳು ಪೂರ್ಣ ಕೋರ್ಸ್ ಶುಲ್ಕ ಕಟ್ಟಬೇಕಿತ್ತು. ಆದರೆ, ಈ ಬಾರಿ ಇದನ್ನು ಬದಲಿಸಲಾಗಿದೆ. 12 ಲಕ್ಷ ರೂ.ಗಿಂತ ಹೆಚ್ಚಿನ ಕೋರ್ಸ್ ಶುಲ್ಕದ ವೈದ್ಯಕೀಯ ಸೀಟು ಹಂಚಿಕೆಯಾಗಿದ್ದಲ್ಲಿ ಮತ್ತು ಛಾಯ್ಸ್-2 ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳು 12,00,117 ರೂಪಾಯಿಯನ್ನು ಮುಂಗಡ ಕೋರ್ಸ್ ಶುಲ್ಕವಾಗಿ ಪಾವತಿಸಬೇಕು. ಎಸ್‍ಸಿ/ಎಸ್‍ಟಿ, ಪ್ರವರ್ಗ-1 ಅಭ್ಯರ್ಥಿಗಳು ಎರಡು ಲಕ್ಷ ರೂಪಾಯಿ ಕಟ್ಟಬೇಕು. ಬಾಕಿ ಶುಲ್ಕವನ್ನು 2ನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಣೆ ನಂತರ ಪಾವತಿಸಬೇಕು ಎಂದು ತಿಳಿಸಿದ್ದಾರೆ.

ಮೊದಲ ಸುತ್ತಿನಲ್ಲಿ ‘ಜಿ’ ವರ್ಗದಲ್ಲಿ ವೈದ್ಯಕೀಯ ಸೀಟು ಪಡೆದು, ಛಾಯ್ಸ್-2 ಆಯ್ಕೆ ಮಾಡಿಕೊಂಡವರು ಸೂಚನೆಗಳನ್ವಯ ಕೋರ್ಸ್ ಶುಲ್ಕವನ್ನು ಕಟ್ಟಬೇಕು ಎಂದು ಅವರು ವಿವರಿಸಿದ್ದಾರೆ.

ಅಖಿಲ ಭಾರತ ಕೋಟಾ ಅಥವಾ ಇತರೆ ಯಾವುದೇ ರಾಜ್ಯಗಳ ಕೌನ್ಸೆಲಿಂಗ್ ನಲ್ಲಿ ವೈದ್ಯಕೀಯ ಸೀಟು ಹಂಚಿಕೆಯಾದರೆ, ಅಂತಹವರು ಎರಡನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶ ಪ್ರಕಟಿಸುವ ಮೊದಲೇ ಕೆಇಎ ಸೀಟ್ ಅನ್ನು ರದ್ದುಪಡಿಸಿಕೊಳ್ಳಬಹುದು. ಅಂತಹವರ ಮುಂಗಡ ಶುಲ್ಕವನ್ನು ಸೀಟು ಹಂಚಿಕೆಯಾದ ಕಾಲೇಜುಗಳಿಗೆ ವರ್ಗಾಯಿಸಲಾಗುವುದು. ಪರಿಶಿಷ್ಟ ಜಾತಿ/ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ ಶುಲ್ಕ ಮರುಪಾವತಿಸಲಾಗುವುದು ಎಂದು ವಿವರಿಸಿದ್ದಾರೆ.

ಅಖಿಲ ಭಾರತ ಕೋಟಾ ಅಥವಾ ಇತರೆ ಯಾವುದೇ ರಾಜ್ಯಗಳ ಕೌನ್ಸೆಲಿಂಗ್‍ನಲ್ಲಿ ವೈದ್ಯಕೀಯ ಸೀಟು ಸಿಗದಿದ್ದರೂ ಕೆಇಎ ಮೂಲಕ ಹಂಚಿಕೆಯಾದ ಸೀಟು ರದ್ದುಪಡಿಸಿಕೊಳ್ಳಲು ಬಯಸಿದರೆ, ಅಂತಹವರ ಮುಂಗಡ ಶುಲ್ಕವನ್ನು(12,001,17 ರೂಪಾಯಿ) ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಪರಿಶಿಷ್ಟ ಜಾತಿ/ಪಂಗಡ, ಪ್ರವರ್ಗ-1ರ ಅಭ್ಯರ್ಥಿಗಳ ಎರಡು ಲಕ್ಷ ರೂಪಾಯಿಗಳನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಅವರು ಹೇಳಿದರು.

ಛಾಯ್ಸ್ ಆಯ್ಕೆಗೆ ಆ.16ರವರೆಗೆ ಅವಕಾಶ ನೀಡಿದ್ದು, ಎಚ್ಚರಿಕೆಯಿಂದ ದಾಖಲಿಸಲು ಸಲಹೆ ನೀಡಿದ್ದಾರೆ. ರಾಜ್ಯದಲ್ಲಿ ವೈದ್ಯಕೀಯ ಸೇರಿದಂತೆ ಇತರ ಕೋರ್ಸ್‍ಗಳಲ್ಲಿ ಸೀಟು ಪಡೆದ 1,400 ಮಂದಿಗೆ ಅಖಿಲ ಭಾರತ ಕೋಟಾದಲ್ಲಿ ವೈದ್ಯಕೀಯ ಸೀಟು ಹಂಚಿಕೆಯಾಗಿದ್ದು, ಅಂತಹವರು ಅದೇ ಕೋಟಾದಲ್ಲೇ ಪ್ರವೇಶ ಪಡೆಯುವುದರಿಂದ ರಾಜ್ಯದ ಇತರರಿಗೆ ಅನುಕೂಲ ಆಗಲಿದೆ. ಈ ಬಗ್ಗೆ ಪೋಷಕರ ಜತೆ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಿ ಎಂದು ಅವರು ಸಲಹೆ ನೀಡಿದ್ದಾರೆ.

ಛಾಯ್ಸ್-1 ಆಯ್ಕೆ ಮಾಡಿದವರು ಆ.18ರೊಳಗೆ ಶುಲ್ಕ ಪಾವತಿಸಿ, ಸೀಟು ಖಾತರಿ ಚೀಟಿ ಡೌನ್‍ಲೋಡ್ ಮಾಡಿಕೊಂಡು, ಆ.19ರೊಳಗೆ ಕಾಲೇಜಿಗೆ ವರದಿ ಮಾಡಿಕೊಳ್ಳಬೇಕು. ಸ್ವಾತಂತ್ರ್ಯ ದಿನಾಚರಣೆ ದಿನ ಸೇರಿದಂತೆ ಎಲ್ಲ ರಜಾ ದಿನಗಳಲ್ಲೂ ಕಾರ್ಯನಿರ್ವಹಿಸಲು ಕಾಲೇಜುಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News