×
Ad

ಶಿವಮೊಗ್ಗ ವಿಮಾನ ನಿಲ್ದಾಣ : ನಾಗರಿಕ ವಿಮಾನ ಸೇವೆಯ 2ನೆ ವಾರ್ಷಿಕೋತ್ಸವ ಆಚರಣೆ

1 ಲಕ್ಷ ಪ್ರಯಾಣಿಕರಿಗೆ ಸುಗಮ ಸೇವೆ, ಸದ್ಯದಲ್ಲೇ ಎಂಆರ್‌ಒ ಆರಂಭ: ಎಂ.ಬಿ.ಪಾಟೀಲ್

Update: 2025-08-26 20:52 IST

PC: x.com/ANI

ಬೆಂಗಳೂರು, ಆ.26: ಅಂತರ್‌ ರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ನಿರ್ಮಿತವಾಗಿ, ನಾಗರಿಕ ವೈಮಾನಿಕ ಸೇವೆಗಳ ಕಾರ್ಯಾಚರಣೆ ನಡೆಸುತ್ತಿರುವ ಶಿವಮೊಗ್ಗ ವಿಮಾನ ನಿಲ್ದಾಣವು ಮಂಗಳವಾರ ತನ್ನ ಎರಡನೆಯ ವಾರ್ಷಿಕೋತ್ಸವ ಆಚರಿಸಿತು.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್, ‘ಕೆಎಸ್‍ಐಐಡಿಸಿ ಮೂಲಕ ರಾಜ್ಯ ಸರಕಾರವೆ ನಿರ್ವಹಿಸಲು ಆರಂಭಿಸಿದ ಪ್ರಪ್ರಥಮ ವಿಮಾನ ನಿಲ್ದಾಣ ಇದಾಗಿದೆ. ಕೇವಲ ಎರಡು ವರ್ಷಗಳಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದಿಂದ 2,400 ವಿಮಾನಯಾನಗಳ ಮತ್ತು 1 ಲಕ್ಷಕ್ಕಿಂತ ಹೆಚ್ಚು ಪ್ರಯಾಣಿಕರ ನಿರ್ವಹಣೆ ಯಶಸ್ವಿಯಾಗಿ ನಡೆದಿದೆ' ಎಂದು ಹೇಳಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಇಂಡಿಗೋ ಕಂಪನಿಯು 670 ಯಾನಗಳಿಂದ 31,500 ಪ್ರಯಾಣಿಕರಿಗೆ, ಸ್ಟಾರ್ ಏರ್ ಸಂಸ್ಥೆಯು 1,200 ಯಾನಗಳ ಮೂಲಕ 47 ಸಾವಿರ ಪ್ರಯಾಣಿಕರಿಗೆ ಮತ್ತು ಸ್ಪೈಸ್ ಜೆಟ್ ಸಂಸ್ಥೆಯು 530 ಯಾನಗಳ ಮೂಲಕ 25 ಸಾವಿರ ಪ್ರಯಾಣಿಕರಿಗೆ ವಿಮಾನಯಾನ ಸೇವೆ ಒದಗಿಸಿವೆ ಎಂದು ಅವರು ಅಂಕಿ ಅಂಶಗಳನ್ನು ನೀಡಿದ್ದಾರೆ.

ಶಿವಮೊಗ್ಗ ವಿಮಾನ ನಿಲ್ದಾಣದ ಮೂಲಕ ಬೆಂಗಳೂರು, ಗೋವಾ, ಹೈದರಾಬಾದ್, ತಿರುಪತಿ, ಚೆನ್ನೈಗೆ ಈಗ ವಿಮಾನಸೇವೆ ಲಭ್ಯವಿದೆ. ಇದರಿಂದ ಮಲೆನಾಡು ಪ್ರದೇಶದಲ್ಲಿ ವಾಣಿಜ್ಯ ವಹಿವಾಟು, ಪ್ರವಾಸೋದ್ಯಮ, ಶೈಕ್ಷಣಿಕ ಚಟುವಟಿಕೆ ಮತ್ತು ಆರ್ಥಿಕ ಬೆಳವಣಿಗೆಗೆ ಇಂಬು ದೊರೆತಿದೆ. ಇಲ್ಲಿ ಸದ್ಯದಲ್ಲೆ ವಿಮಾನ ತರಬೇತಿ (ಎಫ್.ಟಿ.ಒ) ಮತ್ತು ಎಂ.ಆರ್.ಒ. ವ್ಯವಸ್ಥೆಗಳನ್ನು ಕೂಡ ಆರಂಭಿಸಲಾಗುವುದು ಎಂದು ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಇಲ್ಲಿಯ ವೈಮಾನಿಕ ಸೇವೆಯ ಬೇಡಿಕೆಗಳನ್ನು ಪೂರೈಸಲು ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಆಧುನಿಕ ಮಾದರಿಯ ಡಿಎಂಇ ಸೌಲಭ್ಯಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಇದರಿಂದ 24/7 ವಿಮಾನಸೇವೆ ಒದಗಿಸಬಹುದು. ಆರ್.ಸಿ.ಎಸ್-ಉಡಾನ್ ಯೋಜನೆಯಡಿ ಇಲ್ಲಿಂದ ದೇಶದ ಮತ್ತಷ್ಟು ನಗರಗಳಿಗೆ ವಿಮಾನ ಸಂಪರ್ಕ ಕಲ್ಪಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.

ಶಿವಮೊಗ್ಗ ವಿಮಾನ ನಿಲ್ದಾಣವು 758 ಎಕರೆ ವಿಸ್ತಾರವಿದ್ದು, ಇದನ್ನು 576.76 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎನ್ನುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News