×
Ad

ಜೂನ್‍ನಲ್ಲಿ 20 ಔಷಧ ಪರವಾನಿಗೆ ರದ್ದು, 133 ಔಷಧ ಪರವಾನಿಗೆ ಅಮಾನತು

Update: 2025-07-11 21:40 IST

ಸಾಂದರ್ಭಿಕ ಚಿತ್ರ | PC : freepik.

ಬೆಂಗಳೂರು : ಔಷಧ ಆಡಳಿತ ಅಮಲುಜಾರಿ ವಿಭಾಗದ ಅಧಿಕಾರಿಗಳು ಜೂನ್ ತಿಂಗಳಿನಲ್ಲಿ ರಾಜ್ಯದ 2,544 ಔಷಧಿ ಮಳಿಗೆಗಳ ಪರಿವೀಕ್ಷಣೆಯನ್ನು ಕೈಗೊಂಡು ಸರಕಾರಿ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿದ 133 ಔಷಧ ಪರವಾನಿಗೆಗಳನ್ನು ಅಮಾನತುಗೊಳಿಸಿದ್ದಾರೆ. 20 ಔಷಧ ಪರವಾನಿಗೆಗಳನ್ನು ರದ್ದುಗೊಳಿಸಿದ್ದಾರೆ ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಆಯುಕ್ತರು ಹೇಳಿದ್ದಾರೆ.

ಶುಕ್ರವಾರ ಪ್ರಕಟನೆ ಹೊರಡಿಸಿರುವ ಅವರು, ಬೆಂಗಳೂರು, ಹುಬ್ಬಳ್ಳಿ ಬಳ್ಳಾರಿಗಳಲ್ಲಿರುವ ಔಷಧ ಪರೀಕ್ಷಾ ಪ್ರಯೋಗಾಲಯಗಳ ಒಟ್ಟು 1,333 ಔಷಧ ಮಾದರಿಗಳನ್ನು ವಿಶ್ಲೇಷಿಸಿದ್ದು, ಅವುಗಳಲ್ಲಿ 1,292 ಉತ್ತಮ ಗುಣಮಟ್ಟದೆಂದು, 41 ಔಷಧ ಮಾದರಿಗಳು ಕಳಪೆ ಗುಣಮಟ್ಟದೆಂದು ಘೋಷಿಸಲಾಗಿದೆ. ಸುಮಾರು 40,48,436 ರೂ. ಮೌಲ್ಯದ ಕಳಪೆ ಗುಣಮಟ್ಟದ ಔಷಧಗಳನ್ನು ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಔಷಧ ಆಡಳಿತ ಅಮಲುಜಾರಿ ಅಧಿಕಾರಿಗಳು ಔಷಧ ಮತ್ತು ಕಾಂತಿವರ್ಧಕ ಅಧಿನಿಮಯ-1940 ಮತ್ತು ಅದರಡಿಯ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿದ ಸಂಸ್ಥೆಗಳ ವಿರುದ್ಧ ಎಪ್ರಿಲ್‍ನಿಂದ ಜೂನ್‍ರವರೆಗೆ ಒಟ್ಟು 81 ಮೊಕದ್ದಮೆಗಳನ್ನು ನ್ಯಾಯಾಲಯಗಳಲ್ಲಿ ದಾಖಲಿಸಿದ್ದಾರೆ. ಒಟ್ಟು 233 ಔಷಧ ಮಳಿಗೆಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಹಾಗೆಯೇ ರಾಜ್ಯದಲ್ಲಿ ಒಳಪಡುವ ರಕ್ತ ಕೇಂದ್ರಗಳ ಮೇಲೆ ವಿಶೇಷ ಕಾರ್ಯಚಾರಣೆ ಜರುಗಿಸಲಾಗಿದ್ದು, ಒಟ್ಟು 122 ರಕ್ತ ಕೇಂದ್ರಗಳಲ್ಲಿ ಪರಿವೀಕ್ಷಣೆ ಮಾಡಲಾಗಿದೆ. ನೂನ್ಯತೆಗಳು ಕಂಡು ಬಂದ 44 ರಕ್ತ ಕೇಂದ್ರಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಔಷಧ ಆಡಳಿತ ವಿಭಾಗದಲ್ಲಿ 26 ಸೇವೆಗಳನ್ನು ಸಕಾಲದಡಿಯಲ್ಲಿ ಒದಗಿಸಲಾಗುತ್ತಿದ್ದು, ಜೂನ್‍ನಲ್ಲಿ ಒಟ್ಟು 1,439 ಅರ್ಜಿಗಳನ್ನು ಸ್ವೀಕರಿಸಿದ್ದು, ಹಿಂದಿನ ಬಾಕಿ ಅರ್ಜಿಗಳು ಸೇರಿ ಒಟ್ಟು 1,012 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಹೇಳಿದ್ದಾರೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರನ್ವಯ ಆಹಾರದ ಸುರಕ್ಷತೆ, ಗುಣಮಟ್ಟ, ನೈರ್ಮಲ್ಯತೆಯ ಕುರಿತಂತೆ ರಾಜ್ಯಾದ್ಯಂತ 1,557 ಬೀದಿ ಬದಿ ವ್ಯಾಪಾರ ಘಟಕಗಳನ್ನು ಪರಿವೀಕ್ಷಿಸಿ, ಲೋಪಗಳು ಕಂಡುಬಂದಿರುವ 406 ಘಟಕಗಳಿಗೆ ನೋಟಿಸ್‍ಗಳನ್ನು ಜಾರಿ ಮಾಡಲಾಗಿದೆ. ಸ್ಥಳದಲ್ಲೇ 44,500 ರೂ.ಗಳ ದಂಡವನ್ನು ವಿಧಿಸಲಾಗಿದೆ. ಇದಲ್ಲದೆ 866 ಬೀದಿ ಬದಿಯ ವ್ಯಾಪಾರ ಘಟಕಗಳಿಗೆ ಉಚಿತ ನೊಂದಣಿಯನ್ನು ಮಾಡಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ರಾಜ್ಯಾದ್ಯಂತ 184 ಬಸ್ ನಿಲ್ದಾಣಗಳಲ್ಲಿನ 871 ಆಹಾರ ಮಳಿಗೆಗಳಿಗೆ ಪರಿವೀಕ್ಷಿಸಿ, ಲೋಪಗಳು ಕಂಡುಬಂದಿರುವ 216 ಘಟಕಗಳಿಗೆ ನೋಟಿಸ್‍ಗಳನ್ನು ಜಾರಿ ಮಾಡಲಾಗಿದೆ. ಸ್ಥಳದಲ್ಲೇ 55 ಸಾವಿರ ರೂ.ಗಳ ದಂಡವನ್ನು ವಿಧಿಸಲಾಗಿದೆ. 95 ಆಹಾರ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ರಾಜ್ಯಾದ್ಯಂತ 604 ಅಂಗನವಾಡಿ ಕೇಂದ್ರಗಳಿಗೆ ಪರಿಶೀಲನಾ ಭೇಟಿ ನೀಡಲಾಗಿದ್ದು, 541 ಆಹಾರ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಸಲ್ಲಿಸಲಾಗಿದೆ. ಅಲ್ಲದೆ ಒಟ್ಟು 903 ಅಂಗನವಾಡಿ ಕೇಂದ್ರಗಳಿಗೆ ಉಚಿತ ನೊಂದಣಿ ಒದಗಿಸಲಾಗಿದೆ. 720 ಹೋಟೆಲ್, ರೆಸ್ಟೋರೆಂಟ್‍ಗಳಿಗೆ ಪರಿಶೀಲನಾ ಭೇಟಿ ನೀಡಲಾಗಿದ್ದು, ಲೋಪಗಳು ಕಂಡುಬಂದಿರುವ 183 ಘಟಕಗಳಿಗೆ ನೋಟಿಸ್‍ಗಳನ್ನು ಜಾರಿ ಮಾಡಲಾಗಿದೆ. ಸ್ಥಳದಲ್ಲೇ 21,500 ರೂ.ಗಳ ದಂಡವನ್ನು ವಿಧಿಸಲಾಗಿದೆ. 234 ಕುಡಿಯುವ ನೀರಿನ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಹೈರಿಸ್ಕ್ ಆಹಾರ ಉದ್ದಿಮೆಗಳ ವರ್ಗದಡಿ ಬರುವ 1,492 ಆಹಾರ ಉದ್ದಿಮೆಗಳನ್ನು ತಪಾಸಣೆ ಮಾಡಲಾಗಿದ್ದು, ಅವುಗಳಲ್ಲಿ ಲೋಪ ಕಂಡುಬಂದಿರುವ 415 ಉದ್ದಿಮೆಗಳಿಗೆ ನೋಟಿಸ್‍ಗಳನ್ನು ನೀಡಲಾಗಿದೆ. ಆಹಾರ ಮಾದರಿಗಳ ವಿಶ್ಲೇಷಣಾ ಫಲಿತಾಂಶಗಳನ್ವಯ ಮುಂದಿನ ಕಾನೂನಾತ್ಮಕ ಕ್ರಮಗಳನ್ನು ಜರುಗಿಸಲಾಗುವುದು ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಆಯುಕ್ತರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News