ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ | ದಲಿತ, ಕಾರ್ಮಿಕರನ್ನು ಹಕ್ಕಿನಿಂದ ವಂಚಿತರನ್ನಾಗಿಸುವ ಸಂಚು : ಕ್ಲಿಫ್ಟನ್ ಡಿ.ರೊಝಾರಿಯೊ
ಸಾಂದರ್ಭಿಕ ಚಿತ್ರ | PC : PTI
ಬೆಂಗಳೂರು, ಅ.10: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ(ಎಸ್‌ಆರ್‌ಐ) ಮಾಡುವ ಮೂಲಕ ಸಂವಿಧಾನದಲ್ಲಿ ನೀಡಿದ ಮತದಾನದ ಹಕ್ಕಿನಿಂದ ದಲಿತರು, ಕಾರ್ಮಿಕರು ಹಾಗೂ ಅಲ್ಪಸಂಖ್ಯಾತರನ್ನು ವಂಚಿತರನ್ನಾಗಿಸುವ ಸಂಚು ಮಾಡಲಾಗುತ್ತಿದೆ ಎಂದು ಸಿಪಿಐಎಂಎಲ್‌ನ ರಾಜ್ಯ ಕಾರ್ಯದರ್ಶಿ ಕ್ಲಿಫ್ಟನ್ ಡಿ.ರೊಝಾರಿಯೊ ಆರೋಪಿಸಿದ್ದಾರೆ.
ಶುಕ್ರವಾರ ನಗರದ ಶಾಸಕರ ಭವನದಲ್ಲಿ ಜನಪರ ಸಂಘಟನೆಗಳು, ರಾಜಕೀಯ ಪಕ್ಷಗಳು, ಕಾರ್ಮಿಕ ಸಂಘಟನೆ, ಮಹಿಳಾ ಸಂಘಟನೆಗಳಿಂದ ಆಯೋಜಿಸಿದ್ದ 'ದುಂಡು ಮೇಜಿನ ಸಭೆ'ಯಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯಿಂದ ದಲಿತ, ಕಾರ್ಮಿಕ ಮತ್ತು ಅಲ್ಪಸಂಖ್ಯಾತರು ಮತದಾನದ ಹಕ್ಕಿನಿಂದ ಹೊರಗುಳಿಯುತ್ತಾರೆ. ಬಿಹಾರದಲ್ಲಿ ಎಸ್‌ಐಆರ್‌ನಿಂದ ಸುಮಾರು 68 ಲಕ್ಷ ಮತದಾರರ ಹೆಸರುಗಳನ್ನು ಅಳಿಸಿ ಹಾಕಲಾಗಿದೆ ಎಂದು ದೂರಿದರು.
ಎಸ್‌ಐಆರ್ ಮಾಡುವಾಗ ಮತದಾರರ ಪಟ್ಟಿಯಲ್ಲಿ ಉಳಿಯಲು ಜನರು ದೇಶದ ಪ್ರಜೆಯೆಂದು ದಾಖಲೆಯನ್ನು ನೀಡಬೇಕು. ಇದರಿಂದ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಕರ್ನಾಟಕದಲ್ಲಿ ಕೂಡ ಎಸ್‌ಐಆರ್ ಮಾಡಲಾಗುತ್ತದೆ ಎಂದು ತೀರ್ಮಾನಿಸಲಾಗಿದೆ. ಅದನ್ನು ಸರಕಾರಗಳು ಒಂದು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತವೆ ಎಂದು ಅವರು ಟೀಕಿಸಿದರು
ವಕೀಲ ವಿನಯ್ ಶ್ರೀನಿವಾಸ್ ಮಾತನಾಡಿ, ಎಸ್‌ಆರ್‌ಐ ಸಂಪೂರ್ಣವಾಗಿ ಎನ್‌ಆರ್ ಸಿಯಂತೆಯೇ ಕಾಣುತ್ತಿದೆ. 2023ರ ವರೆಗೆ ಮತದಾರರು ಮತ ಚಲಾಯಿಸಲು ಅರ್ಹರಲ್ಲ ಎಂದು ಸಾಬೀತುಪಡಿಸುವ ಜವಾಬ್ದಾರಿ ಚುನಾವಣಾ ಆಯೋಗದ ಮೇಲಿತ್ತು. ಆದ್ದರಿಂದ ಅವರ ಹೆಸರನ್ನು ಅಳಿಸಬೇಕು. ಪ್ರಸ್ತಾವಿತ ಎಸ್‌ಐಆರ್ ಅಡಿಯಲ್ಲಿ, ಅವರು ಮತ ಚಲಾಯಿಸಲು ಅರ್ಹರು ಎಂದು ಸಾಬೀತುಪಡಿಸುವ ಜವಾಬ್ದಾರಿ ನಾಗರಿಕರ ಮೇಲಿದೆ. ಇದು ನಾಗರಿಕರನ್ನು ಕಿರುಕುಳಕ್ಕೆ ಗುರಿಯಾಗಿಸುತ್ತದೆ. ಅದರಿಂದ ಅಂಚಿನಲ್ಲಿರುವವರ ಸಾಮೂಹಿಕ ಹಕ್ಕು ನಿರಾಕರಣೆಗೆ ಕಾರಣವಾಗುತ್ತದೆ ಎಂದು ತಿಳಿಸಿದರು.
ಹಿರಿಯ ಪತ್ರಕರ್ತ ಇಂದೂಧರ ಹೊನ್ನಾಪುರ ಮಾತನಾಡಿ, ಎಸ್‌ಐಆರ್ ವಿರೋಧಿಸಲು ನಾವು ಎಲ್ಲ ಸಾಮೂಹಿಕ ಸಂಘಟನೆಗಳನ್ನು ಒಗ್ಗೂಡಿಸಬೇಕು. ಮತದಾರರು ತಮ್ಮ ನಾಯಕರನ್ನು ಆಯ್ಕೆ ಮಾಡುತ್ತಾರೆ. ಆದರೆ ಈಗ ಚುನಾವಣಾ ಆಯೋಗವು ಮತದಾರರನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಸ್ವತಃ ತೆಗೆದುಕೊಳ್ಳುತ್ತಿದೆ. ಆದ್ದರಿಂದ ನಾವು ತಳಮಟ್ಟದಲ್ಲಿ ಒಂದು ಚಳವಳಿಯನ್ನು ನಿರ್ಮಿಸಬೇಕು. ಎಸ್‌ಐಆರ್ ವಿರುದ್ಧ ಬಲವಾಗಿ ನಿಲ್ಲಬೇಕು ಎಂದು ತಿಳಿಸಿದರು.
ಸಭೆಯಲ್ಲಿ ದಸಂಸ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ಕಾರ್ಮಿಕ ಮುಖಂಡ ಅಪ್ಪಣ್ಣ, ಹೋರಾಟಗಾರ ಡಾ.ಹುಲಿಕುಂಟೆ ಮೂರ್ತಿ, ಸಾಮಾಜಿಕ ಕಾರ್ಯಕರ್ತ ರಿಝ್ವಾನ್ ಖಾನ್, ತನ್ವೀರ್ ಅಹ್ಮದ್, ಚಿಂತಕ ಶ್ರೀಪಾದ್ ಭಟ್, ಅಂಕಣಕಾರ ಶಿವಸುಂದರ್ ಇತರರು ಉಪಸ್ಥಿತರಿದ್ದರು.
ಸಭೆಯ ನಿರ್ಣಯಗಳು :
ಸರಕಾರವು ಹಿಂಬಾಗಿಲಿನಿಂದ ತರುತ್ತಿರುವ ಎಸ್‌ಐಆರ್ ವಿರುದ್ಧ ಎಲ್ಲ ಪಕ್ಷಗಳು ಸೇರಿ ಸದನದಲ್ಲಿ ನಿರ್ಣಯ ಹೊರಡಿಸಬೇಕು. ಆಳಂದ ಮತ್ತು ಮಹದೇವಪುರ ಕ್ಷೇತ್ರಗಳ ಮತಗಳ್ಳತನ ಪ್ರಕರಣಗಳನ್ನು ತನಿಖೆ ನಡೆಸಬೇಕು. ಚುನಾವಣಾ ಆಯೋಗವು ಎಸ್‌ಐಆರ್ ಕುರಿತಂತೆ ರಾಜಕೀಯೇತರ ಸಂಘಟನೆಗಳ ಜೊತೆ ಸಭೆ ನಡೆಸಬೇಕು. ಎಲ್ಲ ಮತದಾರರ ಪಟ್ಟಿಯನ್ನು ಪಾರದರ್ಶಕವಾಗಿ ಡಿಜಿಟಲ್ ಮೂಲಕ ಬಹಿರಂಗಪಡಿಸಬೇಕು ಎಂದು ದುಂಡು ಮೇಜಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.