ಲೇಖಕಿಯರ ಸಂಘದಲ್ಲಿ ಯಾವುದೇ ಸಮಸ್ಯೆಯಿಲ್ಲ : ಡಾ.ಎಚ್.ಎಲ್.ಪುಷ್ಪಾ ಸ್ಪಷ್ಟನೆ
ಡಾ.ಎಚ್.ಎಲ್.ಪುಷ್ಪಾ
ಬೆಂಗಳೂರು, ಅ.11 : ‘ಕರ್ನಾಟಕ ಲೇಖಕಿಯರ ಸಂಘದ ಸರ್ವಸದಸ್ಯರ ಸಭೆಯಲ್ಲಿ ಎಲ್ಲ ಭಿನ್ನಾಭಿಪ್ರಾಯಗಳನ್ನು ಪರಸ್ಪರ ಚರ್ಚೆಯ ಮೂಲಕ ಬಗೆಹರಿಸಲಾಗಿದೆ. ಇದೀಗ ಲೇಖಕಿಯರ ಸಂಘದಲ್ಲಿ ಯಾವುದೇ ಸಮಸ್ಯೆ ಇಲ್ಲ’ ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಎಚ್.ಎಲ್.ಪುಷ್ಪಾ ಅವರು ಸ್ಪಷ್ಟಪಡಿಸಿದ್ದಾರೆ.
ಶನಿವಾರ ಈ ಕುರಿತು ಪ್ರಕಟನೆ ನೀಡಿರುವ ಅವರು, ‘ಕರ್ನಾಟಕ ಲೇಖಕಿಯರ ಸಂಘ'ದ ಸರ್ವ ಸದಸ್ಯರ ಸಭೆಯು ಸೆ.7ರಂದು ನಡೆದಿತ್ತು. ಇಂದು ನಡೆದ ಸಭೆಯೂ ಆ ಸಭೆಯ ಮುಂದುವರಿಕೆಯಾಗಿದ್ದು, ಹಿಂದೆ ಮಂಡಿಸಿದ ಲೆಕ್ಕ ಪರಿಶೋಧನಾ ವರದಿ-2024-25 ಕನ್ನಡದಲ್ಲಿ ಇಲ್ಲವೆಂದು ಮತ್ತು ಅದಕ್ಕೆ ಸಂಬಂಧಿಸಿದ ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ಈ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯಲ್ಲಿ ಹಲವು ವಿಷಯಗಳ ಬಗ್ಗೆ ಹಾಗೂ ಲೇಖಕಿಯರ ಸಮ್ಮೇಳನದ ಖರ್ಚು-ವೆಚ್ಚದ ಬಗ್ಗೆ ಸುಧೀರ್ಘವಾಗಿ ಚರ್ಚಿಸಲಾಯಿತು ಎಂದು ತಿಳಿಸಿದ್ದಾರೆ.
ಲೆಕ್ಕಾಚಾರದಲ್ಲಿ ಗೊಂದಲ ಇತ್ತೇ ವಿನಃ ಯಾವುದೇ ಹಣದ ದುರುಪಯೋಗ ನಡೆದಿರಲಿಲ್ಲ. ಆದರೆ, ಲೆಕ್ಕಪತ್ರ ನಿರ್ವಹಣೆ ಮತ್ತು ಲೆಕ್ಕಪರಿಶೋಧನಾ ಪ್ರಸ್ತುತಿಯಲ್ಲಿ ವ್ಯತ್ಯಾಸವಿದೆ ಎಂಬ ಆಕ್ಷೇಪಗಳಿದ್ದರೂ ಕೆಲವು ತಿದ್ದುಪಡಿಗಳನ್ನು ಸೂಚಿಸಿ ಬಹುಮತದಿಂದ ಲೆಕ್ಕಪತ್ರವನ್ನು ಸಭೆಯಲ್ಲಿ ಅಂಗಿಕರಿಸಿ ಅನುಮೋದಿಸಲಾಯಿತು ಎಂದು ಅವರು ಹೇಳಿದ್ದಾರೆ.
ಸದಸ್ಯರಲ್ಲದವರು ಮತ್ತು ಇತರೆ ಸಂಘಟನೆಗಳ ಅಧ್ಯಕ್ಷರು ಲೇಖಕಿಯರ ಸಂಘದ ಕಾರ್ಯ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ಸರ್ವ ಸದಸ್ಯರು ಆಗ್ರಹಿಸಿದ್ದಾರೆ. ಇದೇ ವೇಳೆ ಡಿಸೆಂಬರ್ ತಿಂಗಳಿನಲ್ಲಿ ಮುಂದಿನ ಚುನಾವಣೆಯನ್ನು ಆಯೋಜಿಸಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಪುಷ್ಪಾ ಅವರು ಮಾಹಿತಿ ನೀಡಿದ್ದಾರೆ.
ಲೇಖಕಿಯರ ಸಂಘದ ಚುನಾವಣಾಧಿಕಾರಿಯಾಗಿ ಸಾಮಾಜಿಕ ಕಾರ್ಯಕರ್ತೆ ಹಾಗೂ ವಕೀಲೆ ಪ್ರತಿಭಾ ಆರ್. ಅವರನ್ನು ನೇಮಿಸಲಾಯಿತು. ಸಭೆಯಲ್ಲಿ ಸಂಘದ ಮಾಜಿ ಅಧ್ಯಕ್ಷರು, ಹೊಸದಾಗಿ ನೇಮಕವಾದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ, ಸಲಹಾ ಸಮಿತಿ, ಸದಸ್ಯರು ಹಾಗೂ ಹಿಂದೆ ರಾಜಿನಾಮೆ ನೀಡಿದ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದು ಸಭೆ ನಡೆಯಲು ಸಹಕರಿಸಿದ್ದು ನನಗೆ ಸಮಾಧಾನ ಸಂತೋಷ ತಂದಿದೆ. ಲೇಖಕಿಯರ ಸಂಘದಲ್ಲಿ ಒಗ್ಗಟ್ಟು ಇದ್ದು, ಮೊದಲಿನಂತೆ ಚಟುವಟಿಕೆಗಳು ನಡೆಯುತ್ತವೆ ಎಂದು ಪುಷ್ಪಾ ತಿಳಿಸಿದ್ದಾರೆ.