×
Ad

ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮ | ಹೊಸ ಯೋಜನೆಗಳು- ವೆಬ್ ಪೋರ್ಟಲ್ ಲೋಕಾರ್ಪಣೆ ಮಾಡಿದ ಸಚಿವ ಝಮೀರ್ ಅಹ್ಮದ್

Update: 2025-10-17 19:30 IST

ಬೆಂಗಳೂರು : ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮ(ಕೆಸಿಸಿಡಿಸಿ)ದ ಹೊಸ ಸಾಲ, ಸಹಾಯಧನ ಹಾಗೂ ಕಲ್ಯಾಣ ಯೋಜನೆಗಳು ಮತ್ತು ಅಧಿಕೃತ ವೆಬ್ ಪೋರ್ಟಲ್ ಅನ್ನು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್ ಲೋಕಾರ್ಪಣೆಗೊಳಿಸಿದರು.

ಶುಕ್ರವಾರ ಶೇಷಾದ್ರಿಪುರದಲ್ಲಿರುವ ಕೆಎಂಡಿಸಿ ಭವನದಲ್ಲಿ ಆಯೋಜಿಸಿದ್ದ ಲೋಕಾರ್ಪಣೆ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ರಾಜ್ಯ ಸರಕಾರವು ‘ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು' ಎಂಬ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಮುಖ್ಯಮಂತ್ರಿ ಅವರು ಸಮಾಜದ ಅಂಚಿನಲ್ಲಿರುವ ಸಮುದಾಯಗಳ ಸಬಲೀಕರಣಕ್ಕಾಗಿ ಪ್ರತ್ಯೇಕ ನಿಗಮಗಳನ್ನು ಸ್ಥಾಪಿಸಿ, ವಿಶೇಷ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದ್ದಾರೆ ಎಂದು ಹೇಳಿದರು.

ಅದೇ ರೀತಿಯಲ್ಲಿ, ಕ್ರಿಶ್ಚಿಯನ್ ಸಮುದಾಯದ ಸಾಮಾಜಿಕ ಹಾಗೂ ಆರ್ಥಿಕ ಹಿತಕ್ಕಾಗಿ ಮತ್ತು ಅವರ ಸಂಸ್ಥೆಗಳ ಬಲವರ್ಧನೆಗಾಗಿ ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲಾಗಿದೆ. ಮುಖ್ಯಮಂತ್ರಿಯವರು ಈ ನಿಗಮಕ್ಕೆ ನೀಡಿರುವ 250 ಕೋಟಿ ರೂ.ಗಳ ಅನುದಾನ ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ ಉಪಯೋಗವಾಗಲೆಂದು ನಾನು ಆಶಿಸುತ್ತೇನೆ ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು.

ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಮಾತನಾಡಿ, ನಿಗಮದ ಹೊಸ ಯೋಜನೆಗಳು ಕ್ರಿಶ್ಚಿಯನ್ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗಲಿ ಎಂದು ಶುಭ ಕೋರಿದರು.

ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಪ್ರೊ.ಎಸ್.ಜಾಫೆಟ್ ಮಾತನಾಡಿ, ಈ ನಿಗಮದ ಸ್ಥಾಪನೆಗೆ ಕಾರಣರಾದ ಮುಖ್ಯಮಂತ್ರಿ, ಸಚಿವರು, ಸರಕಾರ ಹಾಗೂ ಕ್ರಿಶ್ಚಿಯನ್ ಮುಖಂಡರಿಗೆ ಕೃತಜ್ಞತೆ ವ್ಯಕ್ತಪಡಿಸಿ, ನಿಗಮದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಬದ್ಧತೆಯನ್ನು ವ್ಯಕ್ತಪಡಿಸಿದರು.

ಈ ನಿಗಮದ ಯೋಜನೆಗಳ ಬಗ್ಗೆ ಚರ್ಚ್‍ಗಳು, ಸಂಸ್ಥೆಗಳು ಮತ್ತು ಮುಖಂಡರು ಹೆಚ್ಚಿನ ಪ್ರಚಾರ ನೀಡುವುದರ ಮೂಲಕ ಅರ್ಹ ವ್ಯಕ್ತಿಗಳು ಈ ಯೋಜನೆಗಳ ಪ್ರಯೋಜನವನ್ನು ಪಡೆಯಲು ಸಹಕಾರ ನೀಡುವಂತೆ ಅವರು ವಿನಂತಿಸಿದರು.

ಕಾರ್ಯಕ್ರಮದಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಂಟೋನಿ ಮರಿಯಾ ಇಮ್ಯಾನ್ಯುಯಲ್, ನಿರ್ದೇಶಕ ಮಂಡಳಿಯ ಸದಸ್ಯರಾದ ಸಂಜೀವ್ ಕುಮಾರ್ ಜಾಗೀರ್ದಾರ್, ಪ್ರಶಾಂತ್ ರಾಜ್ ಜತ್ತನ್ನ, ಹರ್ಷ ಮೆಲ್ವಿನ್ ಲಾಸ್ರಾದೊ, ಸಂದೀಪ್, ಜೋಸೆಫ್ ಕುಮಾರ್, ಜಿ.ಜೆ.ರವಿಕುಮಾರ್, ಜಿ.ಕ್ಸೇವಿಯರ್, ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು.ನಿಸಾರ್ ಅಹ್ಮದ್, ಕೆಎಂಡಿಸಿ ಅಧ್ಯಕ್ಷ ಅಲ್ತಾಫ್ ಖಾನ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News