×
Ad

ಕಲಬುರಗಿಯ ಅಭಿವೃದ್ಧಿಯತ್ತ ತುರ್ತು ಗಮನಹರಿಸಿ, ನಂತರ ಕರಾವಳಿ ಬಗ್ಗೆ ಮಾತನಾಡಿ: ಬಿ.ವೈ.ವಿಜಯೇಂದ್ರ

ಬಿಜೆಪಿ ರಾಜ್ಯಾಧ್ಯಕ್ಷ - ಸಚಿವ ಪ್ರಿಯಾಂಕ್ ಖರ್ಗೆ ಮಧ್ಯೆ 'ಎಕ್ಸ್'ನಲ್ಲಿ ವಾಗ್ಯುದ್ಧ!

Update: 2026-02-16 11:12 IST

ಬೆಂಗಳೂರು: ಸಚಿವ ಪ್ರಿಯಾಂಕ್ ಖರ್ಗೆಯವರು ಕಳೆದ ಆರು ದಶಕಗಳಿಂದ ತಮ್ಮ ಕುಟುಂಬದ ಭದ್ರಕೋಟೆಯಾಗಿರುವ ಕಲಬುರಗಿಯ ಸ್ಥಿತಿಯನ್ನೊಮ್ಮೆ ನೋಡಲಿ, ನಂತರ ಕರಾವಳಿ ಬಗ್ಗೆ ಮಾತನಾಡಲಿ. ಸತತವಾಗಿ ಒಂದಿಲ್ಲೊಂದು ಅಧಿಕಾರವನ್ನು ತಮ್ಮ ಕುಟುಂಬಕ್ಕೆ ಜನರು ನೀಡಿದರೂ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಸಚಿವ ಸ್ಥಾನಗಳು, ಸಂಸದರು, ಶಾಸಕರು ಎಲ್ಲವೂ ಆಗಿದ್ದರೂ, ಕಲಬುರಗಿಯನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗದವರು, ಕರಾವಳಿಯನ್ನು ಟೀಕಿಸುತ್ತಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ರಾಜ್ಯ ಇಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಧ್ಯೆ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ವಾಗ್ಯುದ್ಧವೇ ನಡೆಯುತ್ತಿದೆ. 'ಕೋಮುವಾದದ ಕಾರಣ ಕರಾವಳಿಯಲ್ಲಿ ಬಂಡವಾಳ ಹೂಡಲು ಉದ್ಯಮಿಗಳು ಹಿಂದೇಟು ಹಾಕುತ್ತಿದ್ದಾರೆ' ಎಂಬ ಸಚಿವ ಪ್ರಿಯಾಂಕ್ ಹೇಳಿಕೆಗೆ ವಿಜಯೇಂದ್ರ 'ಎಕ್ಸ್'ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

"ಕರಾವಳಿ ಬಗ್ಗೆ ಮಾತನಾಡುವ ಮುನ್ನ, ಕಲಬುರಗಿಯಲ್ಲಿ ಯಾಕೆ ಐಟಿ-ಬಿಟಿ ಕಂಪನಿಗಳು ಕಾಲಿಟ್ಟಿಲ್ಲ ಎನ್ನುವುದರ ಕಡೆಗೆ ಗಮನ ಹರಿಸಿ. ಕರಾವಳಿಯ ಮಣ್ಣಿನ ಗುಣ ಮತ್ತು ಅಲ್ಲಿನ ಜನರ ಉದ್ಯಮಶೀಲತೆಯನ್ನು, ಪ್ರಗತಿಯನ್ನು, ತಮ್ಮ ಕೀಳು ರಾಜಕೀಯದ ಕಾಮಾಲೆ ಕಣ್ಣಿನಿಂದ ನೋಡದೆ, ವಾಸ್ತವ ನೆಲೆಗಟ್ಟಿನಲ್ಲಿ ನೋಡಲಿ. ಕರಾವಳಿಗೆ ಕೋಮುವಾದದ ಹಣೆಪಟ್ಟಿ ಹಚ್ಚುವ ಪ್ರಿಯಾಂಕ್ ಖರ್ಗೆ ವ್ಯರ್ಥ ಪ್ರಯತ್ನ ಅವರ ರಾಜಕೀಯ ದಿವಾಳಿತನವನ್ನು ತೋರಿಸುತ್ತದೆ' ಎಂದು ವಿಜಯೇಂದ್ರ ಟೀಕಿಸಿದ್ದಾರೆ.

'ಕರಾವಳಿ ಕರ್ನಾಟಕ ತನ್ನ ಸ್ವಂತ ಶಕ್ತಿಯಿಂದ, ಐಟಿ-ಬಿಟಿ ಸೇರಿದಂತೆ ಶಿಕ್ಷಣ, ಬ್ಯಾಂಕಿಂಗ್ ಮತ್ತು ಉದ್ಯಮ ರಂಗದಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದೆ. ಅಂತಹ ನಮ್ಮ ಹೆಮ್ಮೆಯ ಕರಾವಳಿ ಜಿಲ್ಲೆಗಳ ಕುರಿತು, ಅನಗತ್ಯವಾಗಿ ಬಂಡವಾಳ ಹೂಡಿಕೆದಾರರನ್ನು ಹೆದರಿಸುವ ಕೆಲಸವನ್ನು ಸ್ವತಃ ರಾಜ್ಯ ಸರ್ಕಾರದ ಐಟಿ-ಬಿಟಿ ಸಚಿವರೇ ಮಾಡುತ್ತಿರುವುದು ದುರದೃಷ್ಟಕರ. ರಾಜ್ಯದ ಹಿತ ಕಾಯಬೇಕಾದ ಸಚಿವರು, ಹೂಡಿಕೆದಾರರಲ್ಲಿ ಭೀತಿ ಹುಟ್ಟಿಸುವ ಮೂಲಕ ಕರಾವಳಿಯ ಆರ್ಥಿಕತೆಗೆ ಕಳಂಕ ಹಚ್ಚುವ ಪ್ರಯತ್ನ ಮಾಡುತ್ತಿರುವುದು, ಕರಾವಳಿಯ ಜನರಿಗೆ ಮಾಡುತ್ತಿರುವ ಅವಮಾನವಷ್ಟೇ ಅಲ್ಲ, ತಮ್ಮ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಟ್ಟುಕೊಳ್ಳಲು ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಸಂಸ್ಕೃತಿಯ ವ್ಯವಸ್ಥಿತ ಸಂಚು' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಆರೋಪಿಸಿದ್ದಾರೆ.

'ಇತ್ತೀಚೆಗೆ ನಿಮ್ಮ ಸರಕಾರಕ್ಕೆ ಸಲ್ಲಿಕೆಯಾದ ಡಾ.ಗೋವಿಂದರಾವ್ ಸಮಿತಿಯ ವರದಿಯೇ ನಿಮ್ಮ ವೈಫಲ್ಯಕ್ಕೆ ಕನ್ನಡಿ ಹಿಡಿದಿದೆ. ಕಲಬುರಗಿ ಜಿಲ್ಲೆಯ ಎಲ್ಲಾ ತಾಲೂಕು 'ಅತೀ ಹಿಂದುಳಿದ' ಪಟ್ಟಿಯಲ್ಲಿದ್ದರೆ, ಕರಾವಳಿಯು ತನ್ನ ಸ್ವಂತ ಶಕ್ತಿಯಿಂದ ಅಭಿವೃದ್ಧಿ ಹೊಂದಿದ ವಲಯವಾಗಿ ಗುರುತಿಸಿಕೊಂಡಿದೆ. ನಿಮ್ಮ ತವರು ಜಿಲ್ಲೆಯ ಯುವಕ ಯುವತಿಯರಿಗೆ ಶಿಕ್ಷಣ ಮತ್ತು ಉದ್ಯೋಗ ನೀಡಲು ವಿಫಲವಾಗಿರುವ ನೀವು, ಕರಾವಳಿಯ ಜನರ ಉದ್ಯಮಶೀಲತೆಯನ್ನು ಅವಮಾನಿಸುವುದು ನಿಮ್ಮ ರಾಜಕೀಯ ಅಸಮರ್ಥತೆಯನ್ನು, ಅಸಹಾಯಕತೆಯನ್ನು ಮತ್ತು ದುರಂತ ವೈಫಲ್ಯವನ್ನು ತೋರಿಸುತ್ತದೆ. ಮೊದಲು ನಿಮ್ಮ ಭಾಗದ ಅಭಿವೃದ್ಧಿಯತ್ತ ತುರ್ತು ಗಮನಹರಿಸಿ, ನಂತರ ಕರಾವಳಿಯ ಬಗ್ಗೆ ಮಾತನಾಡಿ' ಎಂದು ಹೇಳಿದ್ದಾರೆ.

'ಮುಖ್ಯವಾಗಿ, ಕಳೆದ ಆರು ದಶಕಗಳಿಂದ ಸಚಿವರ ಕುಟುಂಬದ ಭದ್ರಕೋಟೆಯಾಗಿರುವ ಕಲಬುರಗಿಯ ಸ್ಥಿತಿಯನ್ನೊಮ್ಮೆ ನೋಡಿ ನಂತರ ಕರಾವಳಿ ಬಗ್ಗೆ ಮಾತನಾಡಿ. ಸತತವಾಗಿ ಒಂದಿಲ್ಲೊಂದು ಅಧಿಕಾರವನ್ನು ನಿಮ್ಮ ಕುಟುಂಬಕ್ಕೆ ಜನರು ನೀಡಿದರೂ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಸಚಿವ ಸ್ಥಾನಗಳು, ಸಂಸದರು, ಶಾಸಕರು ಎಲ್ಲವೂ ಆಗಿದ್ದರೂ, ಕಲಬುರಗಿಯನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗದವರು, ಕರಾವಳಿಯನ್ನು ಟೀಕಿಸುತ್ತಿರುವುದು ಹಾಸ್ಯಾಸ್ಪದ' ಎಂದಿರುವ ವಿಜಯೇಂದ್ರ, 'ಕಲಬುರಗಿ ಇಂದಿಗೂ ಯಾಕೆ ಹಿಂದುಳಿದಿದೆ, ನಿಮ್ಮನ್ನು ನಂಬಿದ ಜನರನ್ನು ಇನ್ನೂ ಹಿಂದುಳಿಯಲು ಬಿಟ್ಟಿದ್ದು ಯಾಕೆ ಎನ್ನುವುದನ್ನು ಮೊದಲು ಹೇಳಿ. ಅಲ್ಲಿ ಯಾಕೆ ಐಟಿ ಬಿಟಿ ಬಂಡವಾಳ ಹಾಕುವಂತೆ ಮಾಡುವುದು ತಮಗೆ ಸಾಧ್ಯವಾಗಿಲ್ಲ? ಮೊದಲು ಅದರ ಬಗ್ಗೆ ಮಾತನಾಡಿ' ಎಂದು ಹೇಳಿದ್ದಾರೆ.

'ನಿಮ್ಮ ತವರು ಜಿಲ್ಲೆಯ ಯುವಕರು ಉದ್ಯೋಗಕ್ಕಾಗಿ ಇಂದಿಗೂ ಪರದಾಡುತ್ತಿದ್ದಾರೆ, ಕುಡಿಯುವ ನೀರಿಗೂ ಹಾಹಾಕಾರವಿದೆ. ಮೊದಲು ನಿಮ್ಮ ಮನೆಯಂಗಳದ ಕತ್ತಲೆಯನ್ನು ಹೋಗಲಾಡಿಸಿ, ನಂತರ ಬೆಳಗುತ್ತಿರುವ ಕರಾವಳಿಯ ಬಗ್ಗೆ ಮಾತನಾಡಿ. ಕರಾವಳಿಯ ಶಕ್ತಿ ಅಲ್ಲಿನ ಧರ್ಮ ಮತ್ತು ಕರ್ಮದ ಸಮನ್ವಯತೆ. ಸುಮ್ಮನೆ ಅದನ್ನು ಕೆಣಕುವ ಬದಲು, ನಿಮ್ಮ ಆಡಳಿತದ ಅಸಮರ್ಥತೆಯಿಂದ ರಾಜ್ಯದಿಂದ ಹೊರಹೋಗುತ್ತಿರುವ ಕಂಪನಿಗಳನ್ನು ಉಳಿಸಿಕೊಳ್ಳುವತ್ತ ಗಮನಹರಿಸಿ' ಎಂದು ಸಲಹೇ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News