‘ಎಸ್‍ಐಆರ್’ ವಿರೋಧಿಸಿ ಜೂ.30ಕ್ಕೆ ಕಪ್ಪು ಪಟ್ಟಿ ಧರಿಸಿ ಪ್ರತಿರೋಧ
ಸಾಂದರ್ಭಿಕ ಚಿತ್ರ
ಬೆಂಗಳೂರು : ಅಸಂವಿಧಾನಿಕ, ಅವೈಜ್ಞಾನಿಕ, ದೋಷಪೂರಿತ, ದುರುದ್ದೇಶಗಳಿಂದ ಕೂಡಿದ ಮತಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ವಿರೋಧಿಸಿ ಜೂ.30ರಂದು ರಾಜ್ಯಾದ್ಯಂತ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಬಾಯಿಗೆ ಕಪ್ಪುಬಟ್ಟೆ ಕಟ್ಟಿಕೊಂಡು ಅಥವಾ ಕಪ್ಪುಪಟ್ಟಿ ಧರಿಸುವ ಮೂಲಕ ಪ್ರತಿರೋಧ ಚಳವಳಿಯನ್ನು ಹಮ್ಮಿಕೊಳ್ಳಲಾಗಿದೆ.
ರವಿವಾರ ಪತ್ರಿಕಾ ಹೇಳಿಕೆ ನೀಡಿರುವ ಎಸ್‍ಐಆರ್ ವಿರೋಧಿ ಒಕ್ಕೂಟದ ಪದಾಧಿಕಾರಿಗಳಾದ ಜೆ.ಎಂ.ವೀರಸಂಗಯ್ಯ, ಕೆ.ಎಲ್.ಅಶೋಕ್, ಎಸ್‍ಐಆರ್ ಪ್ರಕ್ರಿಯೆ ಪ್ರಜಾತಾಂತ್ರಿಕಗೊಳಿಸಲು ನಾಲ್ಕು ಪ್ರಮುಖ ಒತ್ತಾಯಗಳನ್ನು ಚುನಾವಣಾ ಆಯೋಗವು ಪರಿಗಣಿಸಿ ಪ್ರತಿಕ್ರಿಯಿಸಬೇಕೆಂದು ಮೇ 30 ಮತ್ತು ಜೂ.20ರಂದು ಹೋರಾಟಗಳನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಚುನಾವಣಾ ಆಯೋಗವು ನಾಗರಿಕ ಅಹವಾಲುಗಳಿಗೆ ಇಲ್ಲಿಯವರೆಗೂ ಉತ್ತರಿಸದಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಜೂ.30ರಂದು ಬಾಯಿಗೆ ಕಪ್ಪುಬಟ್ಟೆ ತೊಟ್ಟು ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಮಾತ್ರವಲ್ಲದೇ ಕೆಲಸದ, ವಾಸ ಸ್ಥಳಗಳಲ್ಲಿ ಮತ್ತು ಮನೆಗಳ ಮುಂದೆಯೂ ಎಸ್‍ಐಆರ್ ವಿರೋಧಿ ಫಲಕಗಳನ್ನು ಹಿಡಿದು ಪ್ರತಿಭಟನೆ ದಾಖಲಿಸಲಿದ್ದೇವೆ. ‘ನಮ್ಮ ಗ್ರಾಮ ನಮ್ಮ ಜವಬ್ದಾರಿ’, ‘ನಮ್ಮ ಏರಿಯಾ ನಮ್ಮ ಜವಬ್ದಾರಿ’ ಘೋಷಣೆಯ ಮೇರೆಗೆ ಗ್ರಾಮ ಪಂಚಾಯಿತಿ, ವಾರ್ಡ್ ಪ್ರದೇಶಗಳಲ್ಲಿ ‘ಮತ ಕಾವಲು ಸಮಿತಿ’ಗಳನ್ನು ರಚಿಸುವ ಅಭಿಯಾನವನ್ನೂ ಪ್ರಾರಂಭಿಸುತ್ತಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಚುನಾವಣಾ ಆಯೋಗವು ಯಾವುದೇ ಕಾರಣಕ್ಕೂ ಚುನಾವಣಾ ಮ್ಯಾನ್ಯುಯಲ್ ಮತ್ತು ಪ್ರಕಟಿತ ಎಸ್‍ಐಆರ್ ನಿಯಮಗಳಲ್ಲಿ ಇಲ್ಲದ ತಾರ್ಕಿಕ ವ್ಯತ್ಯಾಸ (ಲಾಜಿಕಲ್ ಡಿಸ್ಕ್ರಿಪೆನ್ಸಿ) ಸಾಫ್ಟವೇರ್ ಅನ್ನು ಕರ್ನಾಟಕದಲ್ಲಿ ಬಳಸಬಾರದು. ಕರಡು ಮತದಾರರ ಪಟ್ಟಿಯನ್ನು ‘ಗ್ರಾಮ/ವಾರ್ಡ್ ಸಭೆ’ಗಳಲ್ಲಿ ಸಾರ್ವಜನಿಕ ಪರಿಶೀಲನೆಗೆ ಒಳಪಡಿಸಬೇಕು. ಮನವಿ-ಆಕ್ಷೇಪಣೆಗಳನ್ನು ಸಲ್ಲಿಸಲು ಕನಿಷ್ಟ ಆರು ತಿಂಗಳ ಸಮಯವಕಾಶ ಇರಬೇಕು. ಮತದಾರರ ಕರಡು ಪಟ್ಟಿಯನ್ನು ರೀಡಬಲ್ ಫಾಮ್ರ್ಯಾಟಿನಲ್ಲಿ ನೀಡಬೇಕು ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ.