ಬಿಡದಿ ಟೌನ್‍ಶಿಪ್ ಬಗ್ಗೆ ಬೀದಿಯಲ್ಲಿ ಚರ್ಚೆ ಸಾಧ್ಯವೇ? : ಬೈರತಿ ಸುರೇಶ್
ಬೆಂಗಳೂರು : ಸರಕಾರದ ಮಹತ್ವಾಕಾಂಕ್ಷೆ ಯೋಜನೆ ಬಗ್ಗೆ ಬೀದಿಯಲ್ಲಿ ಚರ್ಚೆ ಮಾಡಲು ಸಾಧ್ಯವೇ? ಎಂದು ಸಾರಿಗೆ ಸಚಿವ ಬೈರತಿ ಸುರೇಶ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.
ರವಿವಾರ ಹೆಬ್ಬಾಳ ಜಂಕ್ಷನ್‍ನಿಂದ ಪಶು ವೈದ್ಯಕೀಯ ಸಿಬ್ಬಂದಿ ವಸತಿ ಸಮುಚ್ಚಯದ ವರೆಗೆ ನಿರ್ಮಿಸಲು ಉದ್ದೇಶಿಸಿರುವ 3 ಪಥದ ಸುರಂಗ ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
ಬಿಡದಿ ಟೌನ್‍ಶಿಪ್ ಯೋಜನೆ ರಾಜ್ಯ ಸರಕಾರದ ಮಹತ್ವದ ಯೋಜನೆಯಾಗಿದೆ. ಇಂತಹ ಯೋಜನೆ ಬಗ್ಗೆ ಬೀದಿಯಲ್ಲಿ ಕುಳಿತು ಚರ್ಚಿಸಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವದಲ್ಲಿ ಇದೆಲ್ಲಾ ಅಸಾಧ್ಯವಾದ ಮಾತು. ಮುಖ್ಯಮಂತ್ರಿ ಗೌರವಯುತವಾಗಿ ವಿಧಾನಸೌಧದಲ್ಲಿ ಚರ್ಚೆಗೆ ಆಹ್ವಾನಿಸಿದ್ದರು. ಆದರೆ, ಕುಮಾರಸ್ವಾಮಿ ಬಂದಿಲ್ಲ ಎಂದು ಅವರು ದೂರಿದರು.
ಟೌನ್‍ಶಿಪ್ ಯೋಜನೆಗೆ ವಿರೋಧವಾಗಿರುವವರು ಬಹಳ ಕಡಿಮೆ. ಪರ ಇರುವವರು ಹೆಚ್ಚಾಗಿದ್ದಾರೆ. ಶೇ.80ರಷ್ಟು ರೈತರು ಸಮ್ಮತಿ ಸೂಚಿಸಿದರೆ ಮಾತ್ರ ಯೋಜನೆ ಜಾರಿಗೆ ತರಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಅದರ ಪ್ರಕಾರವೇ ಬಿಡದಿ ಟೌನ್‍ಶಿಪ್‍ಗೆ ಶೇ.80ಕ್ಕಿಂತ ಹೆಚ್ಚು ರೈತರು ಸಮ್ಮತಿ ಸೂಚಿಸಿದ್ದಾರೆ. ಹೀಗಾಗಿಯೇ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
ಯುಗಾಂತ್ಯ ಇಲ್ಲ: ‘ರಾಜಕೀಯದಲ್ಲಿ ಯುಗಾಂತ್ಯವೆಂಬುದಾಗಲೀ, ಆರಂಭ ಎಂಬುದಾಗಲೀ ಇಲ್ಲ. ಸಿದ್ದರಾಮಯ್ಯನವರ ಆಶೀರ್ವಾದ ನಮಗಿದೆ ಎಂದು ಸ್ವತಃ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಹೇಳಿದ್ದಾರೆ. ನಾವು ಜೊತೆಯಲ್ಲೇ ರಾಜಕೀಯ ಮಾಡುತ್ತೇವೆಂದೂ ಹೇಳಿದ್ದಾರೆ. ಹೀಗಾಗಿ ಇವರಿಬ್ಬರೂ ಕಾಂಗ್ರೆಸ್ ಪಕ್ಷದಲ್ಲಿ ಜೋಡೆತ್ತುಗಳಿದ್ದಂತೆ. ಈ ಜೋಡೆತ್ತುಗಳು ಹಲವಾರು ವರ್ಷಗಳಿಂದ ದುಡಿದು ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಇವರಿಬ್ಬರು ದುಡಿಯುತ್ತಾ 2028ಕ್ಕೂ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ಶತಃಸಿದ್ಧ’
-ಬೈರತಿ ಸುರೇಶ್ ಸಾರಿಗೆ ಸಚಿವ