ಸ್ವಾಮೀಜಿಯ ಸಲಹೆಯಂತೆ ಆರೆಸ್ಸೆಸ್ ನೋಂದಣಿ ಮಾಡಿಕೊಳ್ಳಲಿ : ಪ್ರಿಯಾಂಕ್ ಖರ್ಗೆ
Update: 2026-06-28 00:03 IST
ಬೆಂಗಳೂರು : ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯ ಸಲಹೆಯಂತೆ ಆರೆಸ್ಸೆಸ್ ನೋಂದಣಿ ಮಾಡಿಕೊಳ್ಳಲಿ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಶನಿವಾರ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಆರೆಸ್ಸೆಸ್ ನೋಂದಣಿ ಮಾಡಿದರೆ ಆರೋಪಗಳಿಂದ ಮುಕ್ತವಾಗಬಹುದು ಎಂದು ಹೇಳಿದ್ದಾರೆ. ಹೀಗಾಗಿ ಕಾನೂನು, ಸಂವಿಧಾನದ ಮಾತು ಕೇಳದ ಆರೆಸ್ಸೆಸ್, ಧರ್ಮಗುರುಗಳ ಮಾತನ್ನಾದರೂ ಗೌರವಿಸಿ ನೋಂದಣಿ ಮಾಡಿಕೊಳ್ಳಬೇಕು ಎಂದಿದ್ದಾರೆ.
ಧರ್ಮಗುರುಗಳ ಮಾತು ಪಾಲಿಸುವ ಮೂಲಕ ಆರೆಸ್ಸೆಸ್ ನವರು ನೈಜ ಧರ್ಮಪಾಲಕರು ಎನ್ನುವುದನ್ನು ನಿರೂಪಿಸಬೇಕು. ದೇಶದ ಕಾನೂನು ಪಾಲಿಸದೆ ತಮ್ಮ ದೇಶಭಕ್ತಿ ನಕಲಿತನದಿಂದ ಕೂಡಿದ್ದು ಎನ್ನಿಸಿಕೊಂಡಿದೆ. ಧರ್ಮದ ವಿಚಾರದಲ್ಲೂ ಪ್ರಾಮಾಣಿಕತೆ ಇಲ್ಲದೆ ಡೋಂಗಿ ಧರ್ಮ ರಕ್ಷಕರಾಗಿದ್ದಾರೆ. ದೇಶಕ್ಕೂ ನಿಷ್ಠರಲ್ಲ, ಧರ್ಮಕ್ಕೂ ನಿಷ್ಠರಲ್ಲ ಎನ್ನುವ ಕಳಂಕದಿಂದ ಹೊರಬರಲು ನೋಂದಣಿಯೊಂದೇ ಪರಿಹಾರ ಎಂದು ಅವರು ಹೇಳಿದ್ದಾರೆ.