ʼಗ್ಯಾರೆಂಟಿʼ ಮೂಲಕ ಜನರ ಖಾತೆಗೆ 70 ಸಾವಿರ ಕೋಟಿ ರೂ. ವರ್ಗಾವಣೆ : ಯತೀಂದ್ರ ಸಿದ್ದರಾಮಯ್ಯ
ಬೆಂಗಳೂರು: ನಮ್ಮ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಐದು ಗ್ಯಾರೆಂಟಿ ಯೋಜನೆಗಳಿಗೆ ಸುಮಾರು 70 ಸಾವಿರ ಕೋಟಿ ರೂ.ಗಳನ್ನು ಜನರ ಖಾತೆಗಳಿಗೆ ನೇರವಾಗಿ ವರ್ಗಾಯಿಸಿದೆ. ನಮ್ಮದು ನುಡಿದಂತೆ ನಡೆಯುತ್ತಿರುವ ಸರಕಾರ ಎಂದು ವಿಧಾನ ಪರಿಷತ್‍ನ ಕಾಂಗ್ರೆಸ್ ಸದಸ್ಯ ಡಾ.ಯತೀಂದ್ರ ಎಸ್. ತಿಳಿಸಿದ್ದಾರೆ.
ಮಂಗಳವಾರ ವಿಧಾನ ಪರಿಷತ್ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣಕ್ಕೆ ವಂದನಾರ್ಪಣಾ ಪ್ರಸ್ತಾವ ಸಲ್ಲಿಸಿ ಮಾತನಾಡಿದ ಅವರು,ಅನ್ನಭಾಗ್ಯ ಯೋಜನೆಯಡಿ 1,28,48,173, ಪಡಿತರ ಚೀಟಿಗಳ ಒಟ್ಟು 4,48,41,976 ಫಲಾನುಭವಿಗಳಿಗೆ ಆಹಾರ ಧಾನ್ಯ ಹಂಚಿಕೆ ಮಾಡಲಾಗಿದೆ. ಆಹಾರ ಖಾತ್ರಿ ಯೋಜನೆಯಡಿ 5 ಕೆ.ಜಿ. ಧಾನ್ಯಗಳನ್ನು ನೀಡುವುದರ ಜೊತೆಗೆ ಉಳಿದ 5 ಕೆಜಿಗೆ ಬದಲಾಗಿ ತಿಂಗಳಿಗೆ ತಲಾ 170 ರೂ.ಗಳನ್ನು ನೀಡಲಾಗುತ್ತಿತ್ತು. ಈಗ ಭಾರತೀಯ ಆಹಾರ ನಿಗಮ ಅಕ್ಕಿ ನೀಡಲು ಒಪ್ಪಿರುವುದರಿಂದ ತಲಾ 10 ಕೆಜಿ ಆಹಾರ ಧಾನ್ಯ ನೀಡಲು ಪ್ರಾರಂಭ ಮಾಡಲಾಗುತ್ತಿದೆ ಎಂದರು.
ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯಡಿ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2000 ರೂ.ಗಳನ್ನು ನೀಡಲಾಗುತ್ತಿದೆ. ಯೋಜನೆ ಪ್ರಾರಂಭವಾದಾಗಿನಿಂದ ಈವರೆಗೆ 1,26,24,547 ಮಹಿಳಾ ಫಲಾನುಭವಿಗಳಿಗೆ ಒಟ್ಟು 36,000 ಕೋಟಿ ರೂ.ಗಳನ್ನು ಇವರ ಖಾತೆಗಳಿಗೆ ನೇರ ಜಮಾ ಮಾಡಲಾಗಿದೆ. ಗೃಹಲಕ್ಷ್ಮಿ ಯೋಜನೆಯ ಸೌಲಭ್ಯವನ್ನು ಲಿಂಗತ್ವ ಅಲ್ಪಸಂಖ್ಯಾತರಿಗೂ ವಿಸ್ತರಿಸಲಾಗಿದೆ ಎಂದು ಅವರು ತಿಳಿಸಿದರು.
ಒಟ್ಟಾರೆಯಾಗಿ 2024-25 ನೇ ಸಾಲಿನ ಬಜೆಟ್ ನಲ್ಲಿ ಆದೇಶ ಹೊರಡಿಸಬೇಕಿದ್ದ 344 ಘೋಷಣೆಗಳ ಪೈಕಿ 331 ಕ್ಕೆ ಸರಕಾರಿ ಆದೇಶ ಹೊರಡಿಸಲಾಗಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಸಮಗ್ರ ಅಭಿವೃದ್ಧಿಗಾಗಿ 2024-25ನೇ ಸಾಲಿನಲ್ಲಿ ಒಟ್ಟಾರೆಯಾಗಿ 39,121 ಕೋಟಿ ರೂ.ಹಂಚಿಕೆ ಮಾಡಿ ಖರ್ಚು ಮಾಡಲಾಗುತ್ತಿದೆ ಎಂದರು.