ರಾಜ್ಯದ 95.75 ಲಕ್ಷ ಆಸ್ತಿಗಳಿಗೆ ಆಸ್ತಿ ಪ್ರಮಾಣ ಪತ್ರ : ಸಚಿವ ಪ್ರಿಯಾಂಕ್ ಖರ್ಗೆ
‘ಗ್ರಾ.ಪಂ.ವ್ಯಾಪ್ತಿಯಲ್ಲಿ ಇ-ಸ್ವತ್ತು ಸೌಲಭ್ಯಕ್ಕೆ ಚಾಲನೆ’
ಬೆಂಗಳೂರು, ಅ.18: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿತರಿಸಲಾಗುವ ನಿರಾಕ್ಷೇಪಣ (ಎನ್.ಒ.ಸಿ) ಪರವಾನಗಿ, ತೆರಿಗೆಗಳು, ಶುಲ್ಕ ಹಾಗೂ ದರಗಳನ್ನು ವೈಜ್ಞಾನಿಕವಾಗಿ ನಿಗದಿಮಾಡಿದ್ದು, ಆಸ್ತಿಗಳಿಗೆ ಇ-ಸ್ವತ್ತು ವಿತರಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಶನಿವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ನಿಯಮಗಳ ಜಾರಿಯಿಂದ 95,75,935 ಆಸ್ತಿಗಳಿಗೆ ಆಸ್ತಿ ಪ್ರಮಾಣ ಪತ್ರ ನೀಡಲು ಅವಕಾಶ ಕಲ್ಪಿಸಲಾಗುತ್ತಿದೆ. ನಿಯಮಗಳಂತೆ ಹದಿನೈದು ದಿನಗಳೊಳಗಾಗಿ ತಂತ್ರಾಂಶದಲ್ಲಿ ತಾಂತ್ರಿಕ ಬದಲಾವಣೆಗಳನ್ನು ತಂದು ಗ್ರಾಮೀಣ ಜನರಿಗೆ ಸೌಲಭ್ಯವನ್ನು ಒದಗಿಸಲಾಗುವುದು ಎಂದು ಹೇಳಿದ್ದಾರೆ.
ನೂತನ ನಿಯಮಗಳಲ್ಲಿ ತೆರಿಗೆ ಲೆಕ್ಕಚಾರ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿದ್ದು, ಇ-ಸ್ವತ್ತು ನಮೂನೆ ವಿತರಿಸಲು ನಿಗದಿತ ಕಾಲಾವಧಿಯನ್ನು 45 ದಿನಗಳಿಂದ 15 ದಿನಗಳಿಗೆ ಕಡಿತಗೊಳಿಸಲಾಗಿದೆ. ನಿಗದಿತ ಅವಧಿಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಅನುಮೋದನೆ ನೀಡದಿದ್ದಲ್ಲಿ ಸ್ವಂಚಾಲಿತ ಅನುಮೋದನೆಗೆ ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
2025-26ನೆ ಸಾಲಿನ ಬಜೆಟ್ ಭಾಷಣದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯ ಬಲವರ್ಧನೆಗಾಗಿ ಮತ್ತು ಗ್ರಾಮೀಣ ಜನರಿಗೆ ವ್ಯವಸ್ಥಿತ ರೀತಿಯಲ್ಲಿ ಸೇವೆಗಳನ್ನು ಒದಗಿಸುವ ಹಿತದೃಷ್ಟಿಯಿಂದ ‘ಎಲ್ಲ ಅಗತ್ಯ ದಾಖಲೆಗಳನ್ನು ಹೊಂದಿರುವ ಆಸ್ತಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲು ಇ-ಸ್ವತ್ತು ಅಭಿಯಾನವನ್ನು ಆರಂಭಿಸಲಾಗುವುದು’ ಎಂದು ಘೋಷಿಸಲಾಗಿತ್ತು. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ವನ್ನು ಪ್ರಸಕ್ತ ಸಾಲಿನ ಎ.7ರಂದು ಅಧಿಸೂಚಿಸಿ ಪ್ರಕರಣ 199(ಬಿ) ಹಾಗೂ ಪ್ರಕರಣ 199(ಸಿ) ಅನ್ನು ಸೇರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಕರಣ 199(ಬಿ) ಸ್ವತ್ತುಗಳಿಗೆ ಖಾತಾ ಅಥವಾ ಪಿಐಡಿ ನೀಡುವ ಕುರಿತಂತೆ ಹಾಗೂ ಪ್ರಕರಣ 199(ಸಿ) ಕಟ್ಟಡ ಮತ್ತು ಪರಿವರ್ತನೆಯಾಗದೆ ಇರುವ ಭೂಮಿ ಅಥವಾ ಪರಿವರ್ತನೆಯಾದ ಭೂಮಿ, ಆದರೆ ಕಂದಾಯ ಭೂಮಿಯಲ್ಲಿನ ಅನುಮೋದಿತವಲ್ಲದ ಬಡಾವಣೆಯ ಮೇಲಿನ ತೆರಿಗೆಗಳ ಮೇಲೆ ಉಲ್ಲೇಖಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಈ ತಿದ್ದುಪಡಿಯನ್ನು ಆಧರಿಸಿ ಅಸ್ತಿತ್ವದಲ್ಲಿದ್ದ ತೆರಿಗೆ ನಿಯಮಗಳು 2021ನ್ನು ನಿರಸನಗೊಳಿಸಿ ಹೊಸದಾಗಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯಿತಿಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳು, 2025ನ್ನು ಅಧಿಸೂಚಿಸಲಾಗಿದೆ. ಈ ನಿಯಮಗಳ ಜಾರಿಯಿಂದ ರಾಜ್ಯಾದ್ಯಂತ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇ-ಸ್ವತ್ತು ಅಭಿಯಾನವನ್ನು ಯಶಸ್ವಿಯಾಗಿ ಕೈಗೊಳ್ಳಲಾಗುವುದು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಗ್ರಾಮ ಪಂಚಾಯಿತಿಯ ಎಲ್ಲ ಆಸ್ತಿಗಳ ಕರಡು ಪ್ರತಿಗಳನ್ನು ಸಾರ್ವಜನಿಕರಿಗೆ ತಂತ್ರಾಂಶದ ಮೂಲಕ ಒದಗಿಸಿ ತಮ್ಮ ಆಸ್ತಿಗಳ ಮಾಹಿತಿಯನ್ನು ಸರಿಪಡಿಸಿಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ. ಆಸ್ತಿ ಮಾಲಕರು ತಮ್ಮ ಆಸ್ತಿಗಳ ತೆರಿಗೆಯನ್ನು ಗ್ರಾಮ ಪಂಚಾಯಿತಿಗೆ ಪಾವತಿಸುವ ಮೂಲಕ ದಾಖಲೆ ಪಡೆಯಲು ಹಾಗೂ ಗ್ರಾಮ ಪಂಚಾಯತಿಯ ಸ್ವಂತ ಸಂಪನ್ಮೂಲಗಳನ್ನು ವೃದ್ದಿಗೊಳಿಸುವುದರ ಮೂಲಕ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಕಾರ್ಯಗಳಲ್ಲಿ ಪಾಲ್ಗೊಳಲು ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
ತೆರಿಗೆ, ದರ ಅಥವಾ ಶುಲ್ಕಗಳ ನಿರ್ಧರಣೆ, ವಸೂಲಿ ಅಥವಾ ವಿಧಿಸುವಿಕೆಯಿಂದ ಬಾಧಿತನಾದ ಯಾವುದೆ ವ್ಯಕ್ತಿಯು ಉಪ ಕಾರ್ಯದರ್ಶಿ(ಅಭಿವೃದ್ದಿ) ಅವರಿಗೆ ಮೊದಲನೆ ಮೇಲ್ಮನವಿ ಸಲ್ಲಿಸಲು ಅವಕಾಶ ಮಾಡಲಾಗಿದೆ. ಈ ಆದೇಶದಿಂದ ಬಾಧಿತನಾದ ವ್ಯಕ್ತಿಯು ಎರಡನೆ ಮೇಲ್ಮನವಿಯನ್ನು ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಮಹತ್ತರ ಹಾಗೂ ಐತಿಹಾಸಿಕ ನಡೆ: ‘ವೈಜ್ಞಾನಿಕವಾಗಿ ಹಾಗೂ ಪಾರದರ್ಶಕವಾಗಿ ತೆರಿಗೆ, ದರ ಹಾಗು ಶುಲ್ಕಗಳನ್ನು ನಿಗದಿ ಮಾಡುವುದರಿಂದ ಮತ್ತು ಪರವಾನಗಿ, ನಿರಾಕ್ಷೇಪಣ ಪತ್ರಗಳನ್ನು ಕ್ರಮಬದ್ಧವಾಗಿ ಮತ್ತು ಕಾಲಮಿತಿಯೊಳಗೆ ತಂತ್ರಾಂಶವನ್ನು ಅಭಿವೃದ್ಧಿಪಡಿಸಿ ನೀಡುವುದರಿಂದ ಗ್ರಾಮ ಪಂಚಾಯಿತಿಗಳ ಸ್ವಂತ ಸಂಪನ್ಮೂಲದ ಹೆಚ್ಚಳಕ್ಕೆ ಕಾರಣವಾಗುವುದಲ್ಲದೆ ಸ್ವಯಂ ಸರಕಾರಗಳಾಗಿ ಗ್ರಾಮ ಪಂಚಾಯತಿಗಳು ತಮ್ಮ ಅಭಿವೃದ್ಧಿಯನ್ನು ತಾವೆ ನಿರ್ಧರಿಸುವ ದಿಸೆಯಲ್ಲಿ ಇದೊಂದು ಮಹತ್ತರ ಹಾಗೂ ಐತಿಹಾಸಿಕ ನಡೆಯಾಗಿದೆ’
-ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ