×
Ad

10 ವರ್ಷಗಳಲ್ಲಿ 25 ಕೋಟಿ ಉದ್ಯೋಗ ಸೃಷ್ಟಿ : ಶೋಭಾ ಕರಂದ್ಲಾಜೆ

Update: 2025-07-12 21:10 IST


ಬೆಂಗಳೂರು : ದೇಶದಲ್ಲಿ ಕ್ವಿಕ್ ಕಾಮರ್ಸ್ ಅಡಿ ಉದ್ಯೋಗ ಸೃಷ್ಟಿ ಕಾರ್ಯ ವೇಗವಾಗಿ ನಡೆಯುತ್ತಿದ್ದು, ಮುಂದಿನ 10 ವರ್ಷಗಳಲ್ಲಿ ಇವರ ಸಂಖ್ಯೆ 25 ಕೋಟಿಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಬಿ.ಪ್ಯಾಕ್ ಮತ್ತು ಸಿಜಿಐ ಸಹಯೋಗದಲ್ಲಿ ಮಹಿಳೆಯರು ಮತ್ತು ಮಂಗಳಮುಖಿಯರಿಗೆ ಉಚಿತ ಆಟೋ ಚಾಲನಾ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.

ದೇಶದಲ್ಲಿ ಕ್ವಿಕ್ ಕಾಮರ್ಸ್ ಅಡಿ ಉದ್ಯೋಗ ಸೃಷ್ಟಿ ಕಾರ್ಯ ವೇಗವಾಗಿ ನಡೆಯುತ್ತಿದೆ. ಪ್ರಸ್ತುತ ಸುಮಾರು 60 ಲಕ್ಷ ಜನರು ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ಮುಂದಿನ 10 ವರ್ಷಗಳಲ್ಲಿ ಇವರ ಸಂಖ್ಯೆ 25 ಕೋಟಿಯಾಗುವ ಸಾಧ್ಯತೆಯಿದೆ. ಎಲ್ಲವೂ ಆನ್‍ಲೈನ್‍ನಡಿಯಲ್ಲಿ ಸುಲಭವಾಗಿ ಲಭ್ಯವಾಗುವ ಕಾಲ ಬಂದಿದೆ ಎಂದು ನುಡಿದರು.

ಬ್ರಿಟಿಷರ ಕಾಲದಲ್ಲಿ ರೂಪಿಸಲಾಗಿರುವ ಕಾರ್ಮಿಕ ನೀತಿಗಳನ್ನೆ ಈಗಲೂ ಅನುಸರಿಸಲಾಗುತ್ತಿದೆ. ಈಗ ಅವುಗಳನ್ನು ಒಟ್ಟುಗೂಡಿಸಿ 4 ಭಾಗಗಳನ್ನಾಗಿ ಮಾಡಲು ಚಿಂತಿಸಲಾಗಿದೆ. ಸಂಘಟಿತರಂತೆಯೇ ಅಸಂಘಟಿತ ಕಾರ್ಮಿಕರಿಗೂ ಸಾಮಾಜಿಕ ಭದ್ರತೆ ಒದಗಿಸುವುದು ಸೇರಿದಂತೆ ಹಲವು ಬದಲಾವಣೆ ತರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ದೇಶದಲ್ಲಿ ಶೇ.10ರಷ್ಟು ಜನರು ಮಾತ್ರ ಸಂಘಟಿತ ಉದ್ಯೋಗಿಗಳಿದ್ದು, ಶೇ.90ರಷ್ಟು ಅಸಂಘಟಿತ ಕಾರ್ಮಿಕರಿದ್ದಾರೆ. ಪ್ರಮುಖವಾಗಿ ಕೃಷಿ, ಕೂಲಿ ಕಾರ್ಮಿಕರೂ ಹೆಚ್ಚಿದ್ದಾರೆ. ಇವರಿಗೂ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ ನೀಡುವ ಅವಶ್ಯಕತೆ ಇದ್ದು, ಪಿಎಫ್‍ನಂತಹ ಯೋಜನೆಗಳಿಗೆ ಇವರೂ ಒಳಗೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಡಲಾಗಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಸಿಜಿಐ ಏಷಿಯಾ ಪೆಸಿಫಿಕ್ ಉಪಾಧ್ಯಕ್ಷೆ ಶ್ರೀವಿದ್ಯಾ ನಟರಾಜ್, ಸಾರಿಕಾ ಪ್ರಧಾನ್, ಸಿಎಸ್‍ಆರ್ ಮುಖ್ಯಸ್ಥ ಸುಧಾಕರ್ ಪೈ, ಬಿ.ಪ್ಯಾಕ್ ಸದಸ್ಯರಾದ ಮಿಮಿ ಪಾರ್ಥಸಾರಥಿ ಸೇರಿದಂತೆ ಪ್ರಮುಖರಿದ್ದರು.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News