ಬೆಂಗಳೂರು | ಆ್ಯಂಬುಲೆನ್ಸ್‌ನಿಂದ ಸರಣಿ ಅಪಘಾತ: ಓರ್ವ ಮೃತ್ಯು, ಆರು ಮಂದಿಗೆ ಗಾಯ
ಸಾಂದರ್ಭಿಕ ಚಿತ್ರ
ಬೆಂಗಳೂರು: ಖಾಸಗಿ ಆ್ಯಂಬುಲೆನ್ಸ್ ನಿಂದ ಸಂಭವಿಸಿದ ಸರಣಿ ಅಪಘಾತದಲ್ಲಿ ಓರ್ವ ಮೃತಪಟ್ಟು, ಆರು ಜನ ಗಾಯಗೊಂಡ ಘಟನೆ ಇಲ್ಲಿನ ವಿಲ್ಸನ್ ಗಾರ್ಡನ್‍ನ ಬಿಟಿಎಸ್ ರಸ್ತೆಯಲ್ಲಿ ವರದಿಯಾಗಿದೆ.
ಮೇ 1ರಂದು ಘಟನೆ ಸಂಭವಿಸಿದ್ದು, ಫುಟ್‍ಪಾತ್ ಮೇಲೆ ಹಣ್ಣಿನಂಗಡಿ ನಡೆಸುತ್ತಿದ್ದ ರಮೇಶ್(49) ಮೃತಪಟ್ಟಿದ್ದಾರೆ. ಘಟನೆಯಲ್ಲಿ ನಾಗರಾಜು, ಶಿವರಾಂ, ಸೋಮಸುಂದರಂ, ಪ್ರವೀಣ್ ಕುಮಾರ್, ಬ್ರಹ್ಮಾನಂದ ಕುಮಾರ್ ಹಾಗೂ ಪವನ್ ಎಂಬುವವರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ ವಿಲ್ಸನ್ ಗಾರ್ಡನ್ ಸಂಚಾರ ಠಾಣೆ ಪೊಲೀಸರು, ಆ್ಯಂಬುಲೆನ್ಸ್ ವಾಹನದಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನ, ಆಟೋಗಳಿಗೆ ಢಿಕ್ಕಿಯಾಗಿದೆ. ಬಳಿಕ ಫುಟ್‍ಪಾತ್ ಮೇಲಿದ್ದ ಹಣ್ಣಿನಂಗಡಿಗೆ, ಪಾದಚಾರಿಗಳಿಗೆ ಢಿಕ್ಕಿಯಾಗಿದೆ ಎಂದು ತಿಳಿಸಿದ್ದಾರೆ.
ಅಪಘಾತದಲ್ಲಿ ಮೃತಪಟ್ಟ ರಮೇಶ್ ಅವರ ಸಹೋದರ ನಾಗರಾಜ್ ನೀಡಿರುವ ದೂರಿನನ್ವಯ ವಿಲ್ಸನ್ ಗಾರ್ಡನ್ ಸಂಚಾರ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಸದ್ಯ ಆ್ಯಂಬುಲೆನ್ಸ್ ವಾಹನದ ಚಾಲಕ ಚಿರಂಜೀವಿ(30) ಎಂಬುವನನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೆÇಲೀಸರು ಹೇಳಿದ್ದಾರೆ.