×
Ad

ಸರಕಾರದ ಆರ್ಥಿಕ ದುಸ್ಥಿತಿಯನ್ನು ಮುಚ್ಚಲು ಬಿಜೆಪಿ ಸಂಸದರ ವಿರುದ್ಧ ಆರೋಪ : ಸಂಸದ ಬಸವರಾಜ ಬೊಮ್ಮಾಯಿ

"ಆರೆಸ್ಸೆಸ್‌ ವಿರುದ್ದದ ರಾಜ್ಯ ಸರ್ಕಾರದ ಆದೇಶ ಕೋರ್ಟ್ ನಲ್ಲಿ ನಿಲ್ಲುವುದಿಲ್ಲ"

Update: 2025-10-25 16:02 IST

 ಬಸವರಾಜ ಬೊಮ್ಮಾಯಿ

ಬೆಂಗಳೂರು: ರಾಜ್ಯ ಸರ್ಕಾರ ಆರ್ಥಿಕ ದುಸ್ಥಿತಿಯಲ್ಲಿದ್ದು, ಅದನ್ನು ಮುಚ್ಚಿಡಲು ಬಿಜೆಪಿ ಸಂಸದರ ವಿರುದ್ಧ ಆರೋಪ ಮಾಡುತ್ತಿದೆ. ಆರೆಸ್ಸೆಸ್‌ ವಿರುದ್ದದ ರಾಜ್ಯ ಸರ್ಕಾರದ ಆದೇಶ ಕೋರ್ಟ್ ನಲ್ಲಿ ನಿಲ್ಲುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಆರೆಸ್ಸೆಸ್‌ ಕಾರ್ಯಕ್ರಮದಿಂದ ದೂರ ಉಳಿಯುವ ಪ್ರಶ್ನೆಯೇ ಇಲ್ಲ. ಇದು ಸ್ವತಂತ್ರ ದೇಶ. ಇಲ್ಲಿ ವಾಕ್ ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ್ಯ, ಸಾಮಾಜಿಕ ಹಾಗೂ ಧಾರ್ಮಿಕ ಸ್ವಾತಂತ್ರ್ಯ ಇದೆ. ಸರ್ಕಾರವು ಆರೆಸ್ಸೆಸ್‌ ವಿರುದ್ಧ ನೀಡಿರುವ ಆದೇಶವು ಮೂಲ ಸಂವಿಧಾನದ ವಿರುದ್ಧವಾಗಿದೆ. ಅದು ಕೋರ್ಟ್‌ನಲ್ಲಿ ನಿಲ್ಲುವುದಿಲ್ಲ ಎಂದು ಹೇಳಿದರು.

ಬೇರೆ ಸಂಘಟನೆಗಳಿಗೆ ಪಥಸಂಚಲನಕ್ಕೆ ಅವಕಾಶ ನೀಡುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರು ಪಥಸಂಚಲನ ಮಾಡಲು ಬಯಸುತ್ತಾರೆ, ಅವರಿಗೆ ಅವಕಾಶ ನೀಡಬೇಕು. ಇದು ದೊಡ್ಡ ದೇಶ. ಎಲ್ಲ ಸಂಘಟನೆಗಳಿಗೂ ಹಕ್ಕು ನೀಡಬೇಕು. ಪಥಸಂಚಲನಕ್ಕೆ ಅವಕಾಶ ನೀಡುವ ವಿಚಾರದಲ್ಲಿ ಕೋರ್ಟ್ ಸರಿಯಾದ ತೀರ್ಮಾನ ಕೈಗೊಂಡಿದೆ. ನ.2ಕ್ಕೆ ಪಥಸಂಚಲನಕ್ಕೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲು ಸರ್ಕಾರಕ್ಕೆ ಕೋರ್ಟ್ ಸೂಚನೆ ನೀಡಿದೆ. ಶಾಂತಿ, ಸುವ್ಯವಸ್ಥೆ ಕಾಪಾಡಿ ಅವಕಾಶ ಕಲ್ಪಿಸಬೇಕು. ಪಥ ಸಂಚಲನ ಎಲ್ಲ ಕಡೆ ನಡೆದಿದೆ. ಎಲ್ಲಿ ಆಕ್ಷೆಪ ಇದೆ ಅಲ್ಲಿ ತೊಂದರೆಯಾಗಿದೆ. ಸರ್ಕಾರದ ಆದೇಶದಿಂದ ಗೊಂದಲ ಉಂಟಾಗಿದೆ ಎಂದು ಹೇಳಿದರು.

ಆರೆಸ್ಸೆಸ್‌ ಪಥ ಸಂಚಲನದಲ್ಲಿ ದೊಣ್ಣೆಗಳನ್ನು ಬಳಸುವ ಬಗ್ಗೆ ಸಚಿವರು ಆಕ್ಷೇಪ ಎತ್ತುತ್ತಾರೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪಥ ಸಂಚಲನದಿಂದ ಯಾರಿಗಾದರೂ ತೊಂದರೆಯಾಗಿದಿಯಾ, ಸರ್ಕಾರ ಸಮಾಜದಲ್ಲಿ ಕ್ಷೋಭೆ ಉಂಟು ಮಾಡುವ ಕೆಲಸ ಮಾಡುತ್ತಿದೆ. ಇಷ್ಟು ವರ್ಷದಿಂದ ಸಂಘ ಪಥ ಸಂಚಲನ ಮಾಡುತ್ತಿದೆ. ಯಾರಿಗಾದರೂ ತೊಂದರೆಯಾಗಿದೆಯಾ, ಮೊಹರಂ ನಲ್ಲಿ ಕಬ್ಬಿಣದ ಚಾಟಿಯಿಂದ ಹೊಡೆದುಕೊಳ್ಳುತ್ತಾರೆ ಅದು ಸರಿನಾ, ಜಗತ್ತಿನಲ್ಲಿ ಎಲ್ಲರಿಗೂ ಅವರದೇ ಆದ ನಂಬಿಕೆಗಳಿವೆ. ಸರ್ಕಾರ ಅವುಗಳಿಗೆ ಧಕ್ಕೆ ತರುವ ಕೆಲಸ ಮಾಡುವುದು ಸರಿಯಲ್ಲ. ಸರ್ಕಾರದ ಎದುರು ಸಾಕಷ್ಟು ಸಮಸ್ಯೆಗಳಿವೆ. ಸಾಕಷ್ಟು ಮಳೆಯಾಗಿದೆ ಅದಕ್ಕೆ ಪರಿಹಾರ ಕೊಡುವುದನ್ನು ಬಿಟ್ಟು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಸಂಸದರ ಕುರಿತು ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರ ಆರ್ಥಿಕ ದುಸ್ಥಿತಿಯಲ್ಲಿದೆ. ಅದನ್ನು ಮುಚ್ಚಿಕೊಳ್ಳಲು ಆರೋಪ ಮಾಡುತ್ತಿದ್ದಾರೆ. ಕೊವಿಡ್ ಸಂದರ್ಭದಲ್ಲಿ ರಾಜ್ಯಕ್ಕೆ ಕೇಂದ್ರದಿಂದ ಬರುವಷ್ಟು ಹಣ ಬಂದಿದೆ. ರಾಜ್ಯದ ರೈಲ್ವೆ ಯೋಜನೆಗಳಿಗೆ ಯುಪಿಎ ಅವಧಿಯಲ್ಲಿ 5 ಸಾವಿರ ಕೋಟಿ ರೂ. ಘೋಷಣೆ ಆಗಿತ್ತು. ಬಿಡುಗಡೆಯಾಗಲಿಲ್ಲ. ನಮ್ಮ ಅವಧಿಯಲ್ಲಿ ಪ್ರತಿ ವರ್ಷ ಅದಕ್ಕಿಂತ ಹೆಚ್ಚು ಹಣ ರಾಜ್ಯಕ್ಕೆ ಬಂದಿದೆ. ರಾಜ್ಯ ಸರ್ಕಾರ ತಮ್ಮ ಲೋಪ ಮುಚ್ಚಿಕೊಳ್ಳಲು ಎಂಪಿಗಳ ವಿರುದ್ದ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಹೈಕಮಾಂಡ್ ಎಲ್ಲಿದೆ? :

ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸ ಆಗಿದೆ. ಅವರ ಹೇಳಿಕೆ ಕುರಿತು ಸಿಎಂ ತಮ್ಮದೆ ಆದ ಸ್ಪಷ್ಟೀಕರಣ ನೀಡಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಅಂತಿಮ ಅಂತಿದ್ದರು, ಯತೀಂದ್ರ ಹೇಳಿಕೆ ನೋಡಿದಾಗ ಹೈಕಮಾಂಡ್ ಎಲ್ಲಿದೆ ಅನ್ನುವ ಪ್ರಶ್ನೆ ಕಾಂಗ್ರೆಸ್ ನಲ್ಲಿಯೇ ಉಂಟಾಗಿದೆ. ಕಾಂಗ್ರೆಸ್ ಹೈಕಮಾಂಡ್ ದೆಹಲಿಯಲ್ಲಿದಿಯಾ, ಸಿಎಂ ಕುಟುಂಬದವರ ಸುತ್ತ ಇದಿಯಾ ಎನ್ನುವ ಪ್ರಶ್ನೆ ಕಾಂಗ್ರೆಸ್ ನಲ್ಲಿಯೇ ಮೂಡುತ್ತಿದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News