ಶೀಘ್ರದಲ್ಲೇ ಇನ್ನೂ 25 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಣೆ : ಡಿಸಿಎಂ ಡಾ.ಜಿ.ಪರಮೇಶ್ವರ್
"ಎರಡನೇ ಹಂತದ ಬರ ಪರಿಶೀಲನೆ ಅಂತಿಮ ಹಂತದಲ್ಲಿ"
ಡಾ.ಜಿ.ಪರಮೇಶ್ವರ್ | Photo credit : @DrParameshwara
ಬೆಂಗಳೂರು, ಸೆ. 9: ರಾಜ್ಯದಲ್ಲಿ ಬರಪೀಡಿತ ಪ್ರದೇಶಗಳ ಘೋಷಣೆ ಪ್ರಕ್ರಿಯೆ ಇನ್ನೂ ಮುಕ್ತಾಯವಾಗಿಲ್ಲ. ಎರಡನೇ ಹಂತದ ಪರಿಶೀಲನೆ ನಡೆಯುತ್ತಿದ್ದು, 25 ತಾಲ್ಲೂಕುಗಳು ಬರಪೀಡಿತ ಪ್ರದೇಶಗಳೆಂದು ಘೋಷಣೆಗೆ ಅರ್ಹತೆ ಪಡೆದಿವೆ. ಶೀಘ್ರದಲ್ಲೇ ಅವುಗಳನ್ನು ಘೋಷಿಸಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೊದಲ ಹಂತದಲ್ಲಿ ಈಗಾಗಲೇ 101 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದೆ. ಮುಂಗಾರು ಹಾಗೂ ಹಿಂಗಾರು ಮಳೆ ಪರಿಸ್ಥಿತಿಯ ಪರಿಶೀಲನೆ ಮುಂದುವರಿದಿರುವುದರಿಂದ ಹಂತ ಹಂತವಾಗಿ ಬರ ಘೋಷಣೆ ಮಾಡಲಾಗುತ್ತಿದೆ ಎಂದರು.
ಕಳೆದ ವರ್ಷ ಸುಮಾರು 200 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿತ್ತು. ಈ ಬಾರಿಯೂ ಕರಾವಳಿ ಭಾಗವನ್ನು ಹೊರತುಪಡಿಸಿ ರಾಜ್ಯದ ಬಹುತೇಕ ಭಾಗದಲ್ಲಿ ಬರ ಪರಿಸ್ಥಿತಿ ಇರುವುದರಿಂದ 200ಕ್ಕೂ ಹೆಚ್ಚು ತಾಲ್ಲೂಕುಗಳು ಬರಪಟ್ಟಿಗೆ ಸೇರುವ ಸಾಧ್ಯತೆ ಇದೆ ಎಂದು ಹೇಳಿದರು.
ಕೆಲವು ಶಾಸಕರು ತಮ್ಮ ತಾಲ್ಲೂಕುಗಳನ್ನು ಉದ್ದೇಶಪೂರ್ವಕವಾಗಿ ಬರಪಟ್ಟಿಯಿಂದ ಕೈಬಿಡಲಾಗಿದೆ ಎಂದು ಆರೋಪಿಸಿರುವುದನ್ನು ತಳ್ಳಿಹಾಕಿದ ಅವರು, ಬರ ಘೋಷಣೆಯಲ್ಲಿ ರಾಜ್ಯ ಸರ್ಕಾರದ ರಾಜಕೀಯ ಪಾತ್ರ ಇಲ್ಲ. ಕೇಂದ್ರ ಸರ್ಕಾರದ ಮಾರ್ಗಸೂಚಿ, ಉಪಗ್ರಹ ಚಿತ್ರಗಳು, ಗ್ರೌಂಡ್ ಟ್ರೂಥಿಂಗ್ ಹಾಗೂ ವೈಜ್ಞಾನಿಕ ಅಧ್ಯಯನದ ಆಧಾರದಲ್ಲೇ ಬರಪೀಡಿತ ಪ್ರದೇಶಗಳನ್ನು ಘೋಷಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ರಾಜ್ಯ ಸರ್ಕಾರ ಮನಬಂದಂತೆ ಬರ ಘೋಷಣೆ ಮಾಡಿದರೆ ಕೇಂದ್ರದಿಂದ ಪರಿಹಾರ ಪಡೆಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಕೇಂದ್ರದ ನಿಯಮಗಳ ಪ್ರಕಾರವೇ ಪ್ರಕ್ರಿಯೆ ಅನುಸರಿಸಲಾಗುತ್ತಿದೆ ಎಂದು ತಿಳಿಸಿದರು.
ನೈಸ್ ನಿವೇಶನ ಹಂಚಿಕೆ ಕುರಿತು ಮಾತನಾಡಿದ ಪರಮೇಶ್ವರ್, ಸುಪ್ರೀಂ ಕೋರ್ಟ್ ಆದೇಶದಂತೆ ಮಾನವೀಯತೆ ದೃಷ್ಟಿಯಿಂದ 1,453 ನಿವೇಶನಗಳನ್ನು ಹಂಚಿಕೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ರೈತರಿಗೆ ಅನ್ಯಾಯವಾಗದಂತೆ ಈ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಯಾರಿಗೂ ವೈಯಕ್ತಿಕ ಲಾಭ ಮಾಡಿಕೊಡುವ ಉದ್ದೇಶ ಇಲ್ಲ ಎಂದು ಹೇಳಿದರು.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ತಮಿಳುನಾಡು ಕಾವೇರಿ ನೀರನ್ನು 4.8 ಲಕ್ಷ ಹೆಕ್ಟೇರ್ ಪ್ರದೇಶದ ಕೃಷಿಗೆ ಬಳಸುತ್ತಿರುವ ವಿಚಾರವನ್ನು ರಾಜ್ಯ ಸರ್ಕಾರ ಪ್ರಸ್ತಾಪಿಸಲಿದೆ ಎಂದು ಅವರು ತಿಳಿಸಿದರು.