ಬೆಂಗಳೂರಿನಲ್ಲಿ ಆಟೋ ದರ ಪರಿಷ್ಕರಣೆ: ಆ.1ರಿಂದ ಜಾರಿ
ಸಾಂದರ್ಭಿಕ ಚಿತ್ರ | PC : PTI
ಬೆಂಗಳೂರು : ಬೆಂಗಳೂರು ನಗರದ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ನಗರದಲ್ಲಿ ಆಟೋರಿಕ್ಷಾ ಮೀಟರ್ ದರ ಪರಿಷ್ಕರಣೆ ಮಾಡಿದ್ದು, ಕನಿಷ್ಠ ದರ ಮೊದಲ 2 ಕಿ.ಮೀ.ಗೆ 36 ರೂ.ಗೆ ಹೆಚ್ಚಳವಾಗಿದೆ. ನಂತರದ ಪ್ರತಿ ಕಿ.ಮೀ.ಗೆ 18ರೂ. ದರವನ್ನು ನಿಗದಿ ಮಾಡಿ ಆದೇಶ ಹೊರಡಿಸಿದೆ.
ಪರಿಷ್ಕೃತ ದರವು ಆ.1 ರಿಂದ ಜಾರಿಗೆ ಬರಲಿದೆ. ಮೊದಲ ಐದು ನಿಮಿಷ ಕಾಯುವುದಕ್ಕೆ ಉಚಿತವಾಗಿದ್ದು, ಆ ನಂತರದ ಪ್ರತಿ ಹದಿನೈದು ನಿಮಿಷಕ್ಕೆ 10 ರೂ. ಹಾಗೂ ಲಗೇಜ್ ದರ 10 ರೂ. ಆಗಿದೆ. ರಾತ್ರಿ 10 ರಿಂದ ಬೆಳಗಿನ ಜಾವ 5 ಗಂಟೆವರೆಗೆ ಸಾಮಾನ್ಯ ದರ ಜೊತೆಗೆ ಸಾಮಾನ್ಯ ದರದ ಅರ್ಧಪಟ್ಟು ಹೆಚ್ಚು ಮೊತ್ತವನ್ನು ಪಾವತಿ ಮಾಡಬೇಕಾಗುತ್ತದೆ.
ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟಿರುವ ನಿಗದಿತ ಪರಿಷ್ಕೃತ ದರದ ಮೂಲ ಪಟ್ಟಿಯನ್ನು ಪ್ರತಿಯೊಂದು ಆಟೋರಿಕ್ಷಾದಲ್ಲಿ ಪ್ರಮುಖ ಸ್ಥಾನದಲ್ಲಿ ಪ್ರದರ್ಶಿಸಬೇಕು. ಪರಿಷ್ಕೃತ ದರಗಳ ಮೀಟರಿನಲ್ಲಿ ಪ್ರದರ್ಶನವಾಗುವಂತೆ ಮೀಟರ್‍ಗಳನ್ನು ಅ.31 ರೊಳಗಾಗಿ ಪುನಃ ಸತ್ಯಾಪನೆ ಮಾಡಿ ಮುದ್ರೆ ಹಾಕಿಸಿಕೊಳ್ಳುವುದು ಎಂದು ಆದೇಶದಲ್ಲಿ ತಿಳಿಸಿದೆ.