ಬಗರ್ ಹುಕುಂ ಅರಣ್ಯ ಸಾಗುವಳಿ: ರೈತ, ಕಾರ್ಮಿಕರ ಹಕ್ಕುಗಳಿಗಾಗಿ ಅನಿರ್ಧಿಷ್ಠಾವಧಿ ಧರಣಿ
ಬೆಂಗಳೂರು : ರೈತರ ಭೂಮಿ ಕಿತ್ತುಕೊಳ್ಳಲು ಅವಕಾಶ ನೀಡುವ ಜಾಗತಿಕ ಬಂಡವಾಳ ಹೂಡಿಕೆ ಒಪ್ಪಂದ ಮಾಡಿಕೊಳ್ಳಬಾರದು. ಬಂಡವಾಳ ಹೂಡಿಕೆದಾರರ ಸಭೆಯನ್ನು ರದ್ದುಪಡಿಸಬೇಕು ಎಂಬುದು ಸೇರಿದಂತೆ ಮನೆ-ನಿವೇಶನ, ಬಗರ್ ಹುಕುಂ-ಅರಣ್ಯ ಸಾಗುವಳಿ ರೈತ-ಕೂಲಿಕಾರರ ಹಕ್ಕು ರಕ್ಷಣೆಗಾಗಿ ಆಗ್ರಹಿಸಿ, ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ವತಿಯಿಂದ ನಗರದ ಫ್ರೀಡಂ ಪಾರ್ಕ್‍ನಲ್ಲಿ ಮಂಗಳವಾರ ಧರಣಿ ನಡೆಸಲಾಯಿತು.
ನ್ಯಾಯಾಲಯದ ಸೂಕ್ತ ಆದೇಶ ಇಲ್ಲದೇ ಅರಣ್ಯ ಇಲಾಖೆ ಮತ್ತು ರೈತರ ನಡುವಿನ ಸಿವಿಲ್ ವಿವಾದದಲ್ಲಿ ಅರಣ್ಯ ಇಲಾಖೆ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಪೊಲೀಸರನ್ನು ಬಳಸುವುದಕ್ಕೆ ಸೂಕ್ತ ನಿರ್ಬಂಧ ವಿಧಿಸಬೇಕು. ಬಗರ್ ಹುಕ್ಕುಂ ಸಾಗುವಳಿ ಮಂಜೂರಾಗಿರುವ ಹಾಗೂ ಪಹಣಿಗಳಲ್ಲಿ ರೈತರ ಸ್ವಾಧೀನವನ್ನು ದೃಢಪಡಿಸುವ ಕಂದಾಯ ದಾಖಲಾತಿಗಳಿದ್ದರೂ, ಕೂಡ ಒಕ್ಕಲೆಬ್ಬಿಸಿರುವ ಬಗರ್‍ಹುಕುಂ ಸಾಗುವಳಿದಾರರಿಗೆ, ಅವರ ಉಳುಮೆಯ ಸ್ವಾಧೀನವನ್ನು ಮರಳಿ ನೀಡಬೇಕು ಎಂದು ಧರಣಿನಿರತರು ಆಗ್ರಹಿಸಿದರು.
ಬಗರ್‍ಹುಕ್ಕುಂ ಸಕ್ರಾಮಾತಿ ಸಮಿತಿಗೆ ಫಾರಂ.50,53,57ರಲ್ಲಿ ಸಲ್ಲಿಸಿರುವ ರೈತರ ಅರ್ಜಿಗಳನ್ನು ಅರ್ಹ ಮತ್ತು ಅನರ್ಹ ಎಂದು ವರ್ಗಿಕರಿಸಿ ತಿರಸ್ಕರಿಸುವಂತೆ ಜಿಲ್ಲಾಧಿಕಾರಿಗಳಿಗೆ ನೀಡಿರುವ ಅಧಿಕಾರವನ್ನು ಹಿಂಪಡೆಯಬೇಕು. ಕರ್ನಾಟಕ ರಾಜ್ಯ ಭೂಸುಧಾರಣಾ ತಿದ್ದುಪಡಿ ಕಾಯ್ದೆ 2020, ಕರ್ನಾಟಕ ಜಾನುವಾರು ಸಂರಕ್ಷಣಾ ತಿದ್ದುಪಡಿ ಕಾಯ್ದೆ 2020 ರದ್ದಾಗಬೇಕು. ಜತೆಗೆ ಕರ್ನಾಟಕ ಎಪಿಎಂಸಿ ತಿದ್ದುಪಡಿ ಕಾಯ್ದೆ 2024ನ್ನು ಬಲಪಡಿಸಬೇಕು ಎಂದು ಒತ್ತಾಯಿಸಿದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯನ್ನು ಎಲ್ಲ ಗ್ರಾಮಗಳಿಗೆ ಮಾತ್ರವಲ್ಲ ಪಟ್ಟಣ ಪ್ರದೇಶಗಳಿಗೂ ವಿಸ್ತರಿಸಿ, ಭ್ರಷ್ಟಾಚಾರ ಮುಕ್ತವಾಗಿ ಅನುಷ್ಠಾನಗೊಳಿಸಬೇಕು. ನೈಸ್ ಮತ್ತು ನೀಸ್ ಸಂಸ್ಥೆಗಳ ಸಹಯೋಗ ಬಿಎಂಐಸಿ ಯೋಜನೆ ಪರಿಶೀಲಿಸಿರುವ ಟಿ.ಬಿ. ಜಯಚಂದ್ರ ಅಧ್ಯಕ್ಷತೆಯ ಸದನ ಸಮಿತಿ ವರದಿಯ ಶಿಪಾರಸ್ಸುಗಳನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಧರಣಿಯಲ್ಲಿ ಎಐಕೆಎಸ್ ಪ್ರಧಾನ ಕಾರ್ಯದರ್ಶಿ ಡಾ.ವಿಜುಕೃಷ್ಣನ್, ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ವೆಂಕಟ್, ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಯು.ಬಸವರಾಜು, ಪ್ರಧಾನ ಕಾರ್ಯದರ್ಶಿ ಟಿ.ಯಶವಂತ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ ಎಂ.ಪುಟ್ಟಮಾದು, ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಹೊಸ್ಕೇರಾ ಮತ್ತಿತರರು ಉಪಸ್ಥಿತರಿದ್ದರು.
ಪ್ರಮುಖ ಬೇಡಿಕೆಗಳು :
ವಸತಿ ರಹಿತ ಕೂಲಿ ಕಾರ್ಮಿಕರಿಗೆ ಉಚಿತವಾಗಿ ನಿವೇಶನ ನೀಡಬೇಕು. ಬಡ ರೈತರ ಸಾಗುವಳಿಯನ್ನು ಪರಿಶೀಲಿಸದೇ ಡೀಮ್ಡ್ ಅರಣ್ಯಕ್ಕೆ ಹಸ್ತಾಂತರವಾಗಿರುವ ಕಂದಾಯ ಭೂಮಿಗಳನ್ನು ಹಿಂಪಡೆಯಬೇಕು. ಕಿರುಕುಳ ಮತ್ತು ಲಂಚ ಪಡೆಯದೇ ದರ್ಖಾಸ್ತು ಮಂಜೂರು ಸೇರಿದಂತೆ ಎಲ್ಲ ರೈತರ ಕೃಷಿ ಭೂಮಿಗಳನ್ನು ದುರಸ್ಥಿ (ಪೋಡಿ) ಮಾಡಿ ಕೊಡಬೇಕು. ಕಲಬುರಗಿ ಜಿಲ್ಲೆಯಲ್ಲಿ ಒಣಗಿಹೋದ ತೊಗರಿಗೆ ಪರಿಹಾರ ಒದಗಿಸಬೇಕು. ಕ್ವಿಂಟಾಲ್ ತೊಗರಿಗೆ 12,500 ರೂ. ಕನಿಷ್ಠ ಬೆಂಬಲ ಬೆಲೆಗೆ ಖರೀದಿಸಬೇಕು. ತುಂಗಾಭದ್ರ ಎಡದಂಡೆ ಕಾಲುವೆ ಹಾಗೂ ನಾರಾಯಣಪುರ ಬಲದಂಡೆ ಕಾಲುವೆಗೆ ಎಪ್ರಿಲ್ 20ರ ವರೆಗೆ ನೀರು ಹರಿಸಬೇಕು ಎಂದು ಧರಣಿಯಲ್ಲಿ ಆಗ್ರಹಿಸಲಾಯಿತು.