×
Ad

ಬೆಂಗಳೂರು | ಮನೆಗೆ ನುಗ್ಗಿ 40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ : ಪ್ರಕರಣ ದಾಖಲು

Update: 2024-04-25 19:23 IST

ಸಾಂದರ್ಭಿಕ ಚಿತ್ರ

ಬೆಂಗಳೂರು : ವೈದ್ಯರೊಬ್ಬರ ಮನೆಗೆ ನುಗ್ಗಿರುವ ಮೂವರು ಆರೋಪಿಗಳು ನಗದು ಸೇರಿದಂತೆ 40 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗುವ ವೇಳೆ ಎದುರಿಗೆ ಬಂದ ವೈದ್ಯರಿಗೆ ಪಿಸ್ತೂಲು ತೋರಿಸಿ ಬೆದರಿಸಿ ಓಡಿ ಹೋದ ಘಟನೆ ಇಲ್ಲಿನ ಸಹಕಾರ ನಗರದಲ್ಲಿ ವರದಿಯಾಗಿದೆ.

ಎ.24ರ ರಾತ್ರಿ ಘಟನೆ ನಡೆದಿದ್ದು, ಸಹಕಾರ ನಗರದ ನಿವಾಸಿ ವೈದ್ಯ ಡಾ.ಉಮಾಶಂಕರ್ ಎಂಬುವರು ನೀಡಿರುವ ದೂರಿನನ್ವಯ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವೈದ್ಯ ಡಾ.ಉಮಾಶಂಕರ್ ಅವರ ಮನೆಗೆ ಬುಧವಾರ ರಾತ್ರಿ 9 ಗಂಟೆ ಸುಮಾರಿನಲ್ಲಿ ಮೂವರು ಮುಸುಕುದಾರಿ ದರೋಡೆಕೋರರು ನುಗ್ಗಿ ಕೈಗೆ ಸಿಕ್ಕಿದ ಲಕ್ಷಾಂತರ ರೂ. ಹಣ, 500 ಗ್ರಾಂ ಚಿನ್ನಾಭರಣ, ವಿವಿಧ ಕಂಪೆನಿಯ 6 ವಾಚ್‍ಗಳನ್ನು ಬ್ಯಾಗ್‍ನಲ್ಲಿ ತುಂಬಿಕೊಂಡಿದ್ದಾರೆ.

ಆ ಸಂದರ್ಭದಲ್ಲಿ ಹೊರಗೆ ಹೋಗಿದ್ದ ಡಾ.ಉಮಾಶಂಕರ್ ಅವರು ಮನೆ ಬಳಿ ಬಂದಾಗ ಬಾಗಿಲು ತೆರೆದಿತ್ತು. ಮನೆ ಮಧ್ಯದಲ್ಲಿ ಒಬ್ಬ ಮುಖಕ್ಕೆ ಮಾಸ್ಕ್ ಹಾಕಿಕೊಂಡು ನಿಂತಿರುವುದನ್ನು ಗಮನಿಸಿ ಬಾಗಿಲು ಬಳಿ ಹೋಗಿ ‘ಯಾರಪ್ಪ ನೀನು’ ಎಂದು ವಿಚಾರಿಸಿದ್ದಾರೆ ಎನ್ನಲಾಗಿದೆ.

ಆ ವೇಳೆ ಆತ ಜೋರಾಗಿ ‘ಭಯ್ಯಾ, ಭಯ್ಯಾ’ ಎಂದು ಕೂಗಿಕೊಂಡಾಗ ಮನೆಯೊಳಗೆ ಕಳ್ಳರು ನುಗ್ಗಿದ್ದಾರೆಂದು ಅನುಮಾನಗೊಂಡು ತಕ್ಷಣ ಹೊರಗಿನಿಂದ ಬಾಗಿಲು ಚಿಲಕ ಹಾಕಲು ಪ್ರಯತ್ನಿಸಿದ್ದಾರೆ. ಮನೆಯೊಳಗಿದ್ದ ಮತ್ತೊಬ್ಬ ಆರೋಪಿ ತಕ್ಷಣ ಬಂದು ವೈದ್ಯರಿಗೆ ಪಿಸ್ತೂಲ್ ತೋರಿಸಿ ಬಾಗಿಲು ತೆರೆಯಿರಿ, ಇಲ್ಲದಿದ್ದರೆ ನಿಮ್ಮನ್ನು ಸಾಯಿಸುವುದಾಗಿ ಬೆದರಿಸಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪ್ರಕರಣ ಸಂಬಂಧ ಶ್ವಾನದಳ, ಬೆರಳಚ್ಚು ತಜ್ಞರೊಂದಿಗೆ ಸ್ಥಳಕ್ಕೆ ಧಾವಿಸಿದ ಕೊಡಿಗೆಹಳ್ಳಿ ಠಾಣೆಯ ಪೆÇಲೀಸರು ಪರಿಶೀಲನೆ ನಡೆಸಿ ಆರೋಪಿಗಳ ಪತ್ತೆಗೆ ಶೋಧ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News