ಬೆಂಗಳೂರು | ಹೋಟೆಲ್‍ನ ಪ್ರದರ್ಶನ ಫಲಕದಲ್ಲಿ ಕನ್ನಡಿಗರ ವಿರುದ್ಧ ಅವಹೇಳನಕಾರಿ ಬರಹ : ಎಫ್‍ಐಆರ್ ದಾಖಲು
ಬೆಂಗಳೂರು : ಕನ್ನಡಿಗರಿಗೆ ಅಪಮಾನವಾಗುವಂತೆ ಹೋಟೆಲ್‍ನ ಡಿಜಿಟಲ್ ಪ್ರದರ್ಶನ ಫಲಕದಲ್ಲಿ ಅವಹೇಳನಕಾರಿ ಬರಹ ಪ್ರದರ್ಶಿಸಿದ ಕಾರಣ ಹೋಟೆಲ್ ಮಾಲಕರ ವಿರುದ್ಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಎಫ್‍ಐಆರ್ ದಾಖಲಿಸಲಾಗಿದೆ.
ಮೇ 16ರ ರಾತ್ರಿ ತಾವರೆಕೆರೆ ಮುಖ್ಯರಸ್ತೆಯ ಖಾಸಗಿ ಹೋಟೆಲ್‍ವೊಂದರಲ್ಲಿ ಘಟನೆ ನಡೆದಿದ್ದು, ಅವಹೇಳನಕಾರಿ ಬರಹ ಪ್ರದರ್ಶನ ಮಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಎಚ್ಚೆತ್ತ ಪೊಲೀಸರು, ಹೋಟೆಲ್‍ಗೆ ತೆರಳಿ ತಪಾಸಣೆ ನಡೆಸಿ ಪ್ರದರ್ಶನ ಫಲಕದಲ್ಲಿದ್ದ ಬರಹವನ್ನು ತೆಗೆದುಹಾಕಿಸಿದ್ದಾರೆ.
ಬಳಿಕ ಹೋಟೆಲ್ ವ್ಯವಸ್ಥಾಪಕ ನೌಷದ್ ಹಾಗೂ ಓರ್ವ ಸಿಬ್ಬಂದಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದು, ಈ ಸಂಬಂಧ ಹೋಟೆಲ್ ಮಾಲಕರ ವಿರುದ್ಧ ಮಡಿವಾಳ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ತಿಳಿಸಿದ್ದಾರೆ.
ಈ ಸಂಬಂಧವಾಗಿ ತನಿಖೆ ನಡೆಯುತ್ತಿದೆ. ಹೋಟೆಲ್‍ನಲ್ಲಿ ಐವರು ಕೆಲಸ ಮಾಡುತ್ತಿರುವ ಮಾಹಿತಿ ತಿಳಿದುಬಂದಿದ್ದು, ಮಾಲಕರು ವಿದೇಶದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಘಟನೆಗೆ ಸಂಬಂಧಿಸಿದ ಎಲ್ಲರಿಗೂ ನೋಟಿಸ್ ನೀಡಲಾಗುತ್ತದೆ ಮತ್ತು ವಿಚಾರಣೆ ನಡೆಸಲಾಗುತ್ತದೆ ಎಂದು ಡಿಸಿಪಿ ಸಾರಾ ಫಾತಿಮಾ ಮಾಹಿತಿ ನೀಡಿದ್ದಾರೆ.
ಕೃತ್ಯ ಎಸಗಿದವರನ್ನು ಗಡಿಪಾರು ಮಾಡಲೇಬೇಕು: ಘಟನೆ ಕುರಿತು ಪ್ರತಿಕ್ರ್ರಿಯಿಸಿರುವ ಗೀತ ರಚನೆಕಾರ ಕವಿರಾಜ್, ‘ಇಂತಹ ಅತಿರೇಕದ ಕೃತ್ಯಗಳನ್ನು ಕನ್ನಡಿಗರು ಪ್ರಶ್ನಿಸಬೇಕಿದೆ. ಎಲ್ಲ ಸಂದರ್ಭಗಳಲ್ಲಿಯೂ ಕನ್ನಡಪರ ಹೋರಾಟಗಾರರೇ ಬರಲಿ ಎಂದು ಕಾಯಬಾರದು, ಇಂತಹವರನ್ನು ನಾವು ಪ್ರಶ್ನಿಸಬೇಕು. ಇಂತಹ ಧೂರ್ತರಿಗೆ ಯಾವ ವಿನಾಯಿತಿಯನ್ನು ಕೊಡಬಾರದು. ಈ ಹೋಟೆಲ್ ಅನ್ನು ಮುಚ್ಚಿಸಬೇಕು. ಕೃತ್ಯ ಎಸಗಿದವರನ್ನು ಇಲ್ಲಿಂದ ಗಡಿಪಾರು ಮಾಡಲೇಬೇಕು’ ಎಂದು ಆಗ್ರಹಿಸಿದ್ದಾರೆ.
ಹೋಟೆಲ್ ಪರವಾನಿಗೆ ರದ್ದು :
ಡಿಜಿಟಲ್ ಬೋರ್ಡ್‌ನಲ್ಲಿ ಕನ್ನಡಿಗರ ಕುರಿತು ಅವಹೇಳನಕಾರಿ ಬರಹ ಪ್ರದರ್ಶಿಸಿದ್ದ ತಾವರೆಕೆರೆ ಮುಖ್ಯರಸ್ತೆಯಲ್ಲಿರುವ ಜಿ.ಎಸ್.ಸೂಟ್ಸ್ ಹೋಟೆಲ್‌ನ ಪರವಾನಿಗೆಯನ್ನು ರದ್ದುಗೊಳಿಸಿ, ಬೀಗ ಹಾಕಲಾಗಿದೆ ಎಂದು ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರ ರಾವ್ ತಿಳಿಸಿದ್ದಾರೆ.