ಬೆಂಗಳೂರು | ಆರ್ಕಿಟೆಕ್ಚರ್ ವಿದ್ಯಾರ್ಥಿ ಆತ್ಮಹತ್ಯೆ
ಬೆಂಗಳೂರು : ಆರ್ಕಿಟೆಕ್ಚರ್ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಹೊರವಲಯದ ಮಾದನಾಯಕನಹಳ್ಳಿ ಸಮೀಪದ ನಂದರಾಮಯ್ಯನ ಪಾಳ್ಯದಲ್ಲಿ ವರದಿಯಾಗಿದೆ.
ಹಾಸನ ಮೂಲದ ಚನ್ನಕೇಶವ, ತುಳಸಿ ದಂಪತಿ ಪುತ್ರ ಅರುಣ್(22) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಜು.11ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬಾಗಲೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಅರುಣ್, ಸೆಲ್ಫಿ ವಿಡಿಯೋ ಮಾಡಿ ಅದನ್ನು ಕಾಲೇಜಿನ ವಾಟ್ಸಪ್ ಗ್ರೂಪ್‌ಗೆ ಹಾಕಿ ಬಳಿಕ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಾಲೇಜಿನಲ್ಲಿ ಸ್ನೇಹಿತರ ರ‍್ಯಾಗಿಂಗ್‌ನಿಂದ ಸಾಕಷ್ಟು ಮನನೊಂದಿದ್ದ ಎನ್ನುವ ಶಂಕೆ ವ್ಯಕ್ತವಾಗಿದ್ದು, ಆತ್ಮಹತ್ಯೆಗೂ ಮುನ್ನ ಸ್ನೇಹಿತರ ರ‍್ಯಾಗಿಂಗ್ ಬಗ್ಗೆ ಸೆಲ್ಫಿ ವಿಡಿಯೋದಲ್ಲಿ ಉಲ್ಲೇಖಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ವಿಡಿಯೋ ಗಮನಿಸಿದ ಕಾಲೇಜಿನ ಆಡಳಿತ ಮಂಡಳಿಯವರು ಕೂಡಲೇ ಅರುಣ್ ಮನೆಯವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.