×
Ad

ಬೆಂಗಳೂರು | ಅನುಮಾನಾಸ್ಪದವಾಗಿ ಪೊಲೀಸ್ ಕಾನ್‍ಸ್ಟೇಬಲ್ ಮೃತದೇಹ ಪತ್ತೆ

Update: 2024-07-01 20:55 IST

ಬೆಂಗಳೂರು: ನಗರದ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ವಿ.ವಿ.ಯ ಆವರಣದಲ್ಲಿರುವ ಬಾವಿಯಲ್ಲಿ ಮಡಿವಾಳ ಪೊಲೀಸ್ ಠಾಣೆಯ ಕಾನ್‍ಸ್ಟೇಬಲ್ ಶಿವರಾಜ್ ಎಂಬುವರ ಮೃತದೇಹ ಅನುಮಾನಾಸ್ಪದವಾಗಿ ಪತ್ತೆಯಾಗಿದೆ.

2020ನೇ ಸಾಲಿನಲ್ಲಿ ಪೊಲೀಸ್ ಇಲಾಖೆಗೆ ನೇಮಕಗೊಂಡಿದ್ದ ಶಿವರಾಜ್ ಅವರು ಒಂದು ವಾರದಿಂದ ನಾಪತ್ತೆಯಾಗಿದರು. ಇದೀಗ ಅವರ ಮೃತದೇಹ ಬಾವಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳೀಯರು ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಜ್ಞಾನಭಾರತಿ ಠಾಣಾ ಪೊಲೀಸರು ದೌಡಾಯಿಸಿ ಪರಿಶೀಲಿಸಿದ್ದು, ಮೃತದೇಹವನ್ನು ಬಾವಿಯಿಂದ ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಜೂ.25ರಂದು ಕೆಲಸಕ್ಕೆ ಹೋಗಿ ಬರುತ್ತೇನೆ ಎಂದು ದ್ವಿಚಕ್ರ ವಾಹನದಲ್ಲಿ ಶಿವರಾಜ್ ಹೊರಟಿದ್ದರು. ಆದರೆ, ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿರುವುದು ಗೊತ್ತಾಗಿ ಆತನ ಮನೆಯವರು ನೀಡಿದ ದೂರಿನ ಮೇರೆಗೆ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

ಎರಡು ವರ್ಷಗಳ ಹಿಂದೆ ಶಿವರಾಜ್‍ಗೆ ವಾಣಿ ಎಂಬಾಕೆ ಜೊತೆ ವಿವಾಹವಾಗಿತ್ತು. ಆರಂಭದಲ್ಲಿ ದಂಪತಿಯು ಅನ್ಯೋನ್ಯವಾಗಿದ್ದರು. ಕೆಲ ತಿಂಗಳ ಹಿಂದೆ ಇಬ್ಬರ ನಡುವೆ ಬಿರುಕು ಮೂಡಿತ್ತು. ಎರಡು ತಿಂಗಳ ಹಿಂದೆ ದಾವಣಗೆರೆ ಪೊಲೀಸ್ ಠಾಣೆಯಲ್ಲಿ ಶಿವರಾಜ್ ವಿರುದ್ಧ ಪತ್ನಿಯು ವರದಕ್ಷಣೆ ಕಿರುಕುಳ ಆರೋಪ ಮೇರೆಗೆ ಪ್ರಕರಣ ದಾಖಲಿಸಿದ್ದರು ಎನ್ನಲಾಗಿದೆ.

ಸದ್ಯ ನಗರದ ಜ್ಞಾನಭಾರತಿ ಠಾಣಾ ವ್ಯಾಪ್ತಿಯ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News