Bengaluru | ಮಗನನ್ನು ಹತ್ಯೆಗೈದು, ಪತ್ನಿಯನ್ನು ಕೊಠಡಿಯಲ್ಲಿ ಕೂಡಿ ಹಾಕಿದ್ದ ಆರೋಪಿಯ ಬಂಧನ
ಸಾಂದರ್ಭಿಕ ಚಿತ್ರ (AI)
ಬೆಂಗಳೂರು : ಕೌಟುಂಬಿಕ ಕಲಹದಿಂದಾಗಿ ಮಲತಂದೆಯೊಬ್ಬ 18 ವರ್ಷದ ಮಗನನ್ನು ಕೊಂದು, ಪತ್ನಿಯ ಹತ್ಯೆಗೂ ಯತ್ನಿಸಿರುವ ಘಟನೆ ಪದ್ಮನಾಭನಗರದಲ್ಲಿರುವ ಅಪಾರ್ಟ್‍ಮೆಂಟ್‍ವೊಂದರಲ್ಲಿ ನಡೆದಿದ್ದು, ಬನಶಂಕರಿ ಪೊಲೀಸರು ಪ್ರಕರಣದ ಆರೋಪಿಯನ್ನು ಬಂಧಿಸಿದ್ದಾರೆ.
ಬ್ಯಾಂಕ್ ಉದ್ಯೋಗಿಯಾಗಿರುವ ಸುದೀಪ್ ಬಂಧಿತ ಆರೋಪಿಯಾಗಿದ್ದು, ಆರೋಪಿಯು ಪುತ್ರ ಸೋಹಮ್ ದಾಸ್‍ಗೆ ಚಾಕು ಮತ್ತು ಸುತ್ತಿಗೆಯಿಂದ ಹಲ್ಲೆ ಮಾಡಿ, ಹತ್ಯೆ ಮಾಡಿದ್ದಾನೆ. ನಂತರ ತನ್ನ ಪತ್ನಿ ಸೀಮಾ ದಾಸ್ ಅವರ ಕೊಲೆಗೆ ಯತ್ನಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಎರಡು ವರ್ಷಗಳಿಂದ ಸುದೀಪ್ ದಂಪತಿ ತಮ್ಮ ಮಗನೊಂದಿಗೆ ಪದ್ಮನಾಭನಗರದ ರಾಘವೇಂದ್ರ ಲೇಔಟ್‍ನ ಅಪಾರ್ಟ್‍ಮೆಂಟ್‍ನಲ್ಲಿ ವಾಸವಾಗಿದ್ದರು. ನ.16ರಂದು ಆರೋಪಿ ಸುದೀಪ್ ಮಗ ಸೋಹಮ್‍ನನ್ನು ಕೊಂದ ಬಳಿಕ ಪತ್ನಿಯ ಹತ್ಯೆಗೂ ಯತ್ನಿಸಿದ್ದಾನೆ. ಆಕೆಯನ್ನು ಮನೆಯ ಕೊಠಡಿಯೊಂದರಲ್ಲಿ ಕೂಡಿ ಹಾಕಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಮೂರು ದಿನಗಳಿಂದಲೂ ದಂಪತಿ ಸಂಪರ್ಕಕ್ಕೆ ಸಿಗದ ಕಾರಣ ಅನುಮಾನಗೊಂಡ ಅಪಾರ್ಟ್‍ಮೆಂಟ್‍ನ ಮಾಲಕ ಬನಶಂಕರಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ಸ್ಥಳಕ್ಕೆ ಬಂದು ಬಾಗಿಲು ತೆರೆದಾಗ ಮನೆಯ ನೆಲ ಹಾಗೂ ಗೋಡೆಗಳ ಮೇಲೆ ರಕ್ತದ ಕಲೆಗಳು ಪತ್ತೆಯಾಗಿದ್ದವು. ಒಂದು ಕೊಠಡಿಯೊಳಗಿನಿಂದ ಮಹಿಳೆಯ ಕೂಗಾಟ ಕೇಳಿಸಿದ್ದು, ಬಾಗಿಲು ತೆರೆದಾಗ ಸೀಮಾ ದಾಸ್ ಪತ್ತೆಯಾಗಿದ್ದಾರೆ.
ವಿಚಾರಣೆ ನಡೆಸಿದಾಗ ಪತಿ ಸುದೀಪ್ ತಮ್ಮ ಹಾಗೂ ಮಗನ ಮೇಲೆ ಹಲ್ಲೆ ನಡೆಸಿರುವುದಾಗಿ ಸೀಮಾ ಹೇಳಿದ್ದಾರೆ. ಬಳಿಕ ಮನೆಯ ಬಾತ್‍ರೂಮ್‍ನಲ್ಲಿ ಸೋಹಮ್ ದಾಸ್‍ನ ಮೃತದೇಹ ದೊರೆತಿದೆ. ಈ ಮೂಲಕ ಮೂರು ದಿನಗಳ ಹಿಂದೆ ನಡೆದಿರುವ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.