ಬೆಂಗಳೂರು : ರಾಜ್ಯದ ವಿದ್ಯುತ್ ಪ್ರಸರಣ ವ್ಯವಸ್ಥೆಯನ್ನು ಹೆಚ್ಚುತ್ತಿರುವ ಸೈಬರ್ ಅಪಾಯಗಳಿಂದ ರಕ್ಷಿಸಲು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಭಾರತದಲ್ಲೆ ಮೊದಲ ಬಾರಿಗೆ ಕಾರ್ಯಾಚರಣಾ ತಂತ್ರಜ್ಞಾನ (ಓಟಿ) ಸೈಬರ್ ಭದ್ರತಾ ಯೋಜನೆಯನ್ನು ಆರಂಭಿಸಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.

ಶುಕ್ರವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಏಕೀಕೃತ ಭದ್ರತಾ ಮೂಲಸೌಕರ್ಯ ಪರಿಹಾರ ಯೋಜನೆಯಡಿ ಕೆಪಿಟಿಸಿಎಲ್‍ನ 1,474 ಉಪಕೇಂದ್ರಗಳು ಮತ್ತು 6 ಪ್ರಾದೇಶಿಕ ವಿದ್ಯುತ್ ಲೋಡ್ ರವಾನೆ ಕೇಂದ್ರ(ಎಎಲ್‍ಡಿಸಿ)ಗಳನ್ನು ಒಂದೇ ಸಮಗ್ರ ಸೈಬರ್ ಭದ್ರತಾ ವ್ಯವಸ್ಥೆಯಡಿ ತರಲಾಗುತ್ತದೆ ಎಂದು ಹೇಳಿದ್ದಾರೆ.

ವಿದ್ಯುತ್ ಉಪಕೇಂದ್ರಗಳ ಕಾರ್ಯಾಚರಣೆ ಈಗ ಹೆಚ್ಚಾಗಿ ಡಿಜಿಟಲ್ ನಿಯಂತ್ರಣ ವ್ಯವಸ್ಥೆಗಳ ಮೇಲೆ ಅವಲಂಬಿತವಾಗಿದೆ. ಹೀಗಾಗಿ ಸೈಬರ್ ದಾಳಿಗಳು ಕೇವಲ ಕಂಪ್ಯೂಟರ್‍ಗಳಿಗೆ ಸೀಮಿತವಾಗದೆ, ವಿದ್ಯುತ್ ಗ್ರಿಡ್‍ನ ಕಾರ್ಯಾಚರಣೆಯನ್ನೂ ಅಡ್ಡಿಪಡಿಸುವ ಅಪಾಯವಿದೆ ಎಂದು ಅವರು ತಿಳಿಸಿದ್ದಾರೆ.

ಈ ಸೈಬರ್ ಅಪಾಯಗಳಿಂದ ರಾಜ್ಯದ ವಿದ್ಯುತ್ ಪ್ರಸರಣ ವ್ಯವಸ್ಥೆಯನ್ನು ರಕ್ಷಿಸುವುದೇ ಕೆಪಿಟಿಸಿಎಲ್‍ನ ಹೊಸ ಕಾರ್ಯಾಚರಣಾ ತಂತ್ರಜ್ಞಾನ (ಓಟಿ) ಸೈಬರ್ ಭದ್ರತಾ ಯೋಜನೆಯ ಪ್ರಮುಖ ಗುರಿಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ವಿದ್ಯುತ್ ಗ್ರಿಡ್ ನಿರ್ವಹಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಡಿಜಿಟಲ್ ನಿಯಂತ್ರಣ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಜಾರ್ಜ್ ಹೇಳಿದ್ದಾರೆ.

ಈ ಡಿಜಿಟಲ್ ಪರಿಸರ ವ್ಯವಸ್ಥೆ ಸೈಬರ್ ಭದ್ರತೆ ವಿದ್ಯುತ್ ಮೂಲಸೌಕರ್ಯದ ಅವಿಭಾಜ್ಯ ಭಾಗವಾಗಿದೆ. ಭಾರತದಲ್ಲೆ ಮೊದಲ ಬಾರಿಗೆ ಕೈಗೊಳ್ಳುತ್ತಿರುವ ಈ ಯೋಜನೆ ಕರ್ನಾಟಕದ ವಿದ್ಯುತ್ ಪ್ರಸರಣ ಜಾಲದ ಭದ್ರತೆಯನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಜಾರ್ಜ್ ತಿಳಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಅಮ್ಜದ್ ಖಾನ್ ಎಂ./ವಾರ್ತಾಭಾರತಿ

ಬೆಂಗಳೂರು ವರದಿಗಾರರು

ಅಮ್ಜದ್ ಖಾನ್ ಎಂ. ಬೆಂಗಳೂರು ವಿಶ್ವವಿದ್ಯಾಲಯದ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದು, 2007ರಿಂದ ವಾರ್ತಾಭಾರತಿ ಕನ್ನಡ ದೈನಿಕ ಬೆಂಗಳೂರು ಆವೃತ್ತಿಯಲ್ಲಿ ಹಿರಿಯ ರಾಜಕೀಯ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರವಾಸಿ ಅನುಭವದ ವಿಶೇಷ ಲೇಖನಗಳನ್ನು ಬರೆಯುವುದು, ಪುಸ್ತಕ ಓದುವುದು‌, ಸಾಮಾಜಿಕ ಸೇವಾ ಕಾರ್ಯಗಳು ಇವರ ಹವ್ಯಾಸವಾಗಿವೆ.