×
Ad

ಬೆಂಗಳೂರು | ಗುಂಡು ಹಾರಿಸಿ ರೌಡಿಶೀಟರ್ ಹತ್ಯೆ ಪ್ರಕರಣ: ಆರೋಪಿ ಸೆರೆ

Update: 2025-01-22 19:11 IST

ಸಾಂದರ್ಭಿಕ ಚಿತ್ರ

ಬೆಂಗಳೂರು: ರೌಡಿಶೀಟರ್ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದ ಆರೋಪ ಪ್ರಕರಣ ಸಂಬಂಧ ಆರೋಪಿಯನ್ನು ಬಾಗಲೂರು ಠಾಣೆ ಪೊಲೀಸರು ಪಂಜಾಬ್‍ನ ಅಮೃತಸರ ಬಳಿ ಆರೋಪಿ ಬ್ರಿಜೇಶ್‍ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಜ.10ರಂದು ಬಾಗಲೂರು ಠಾಣೆ ವ್ಯಾಪ್ತಿಯ ಅಪಾರ್ಟ್‍ಮೆಂಟ್‍ನಲ್ಲಿ ಗುಣಶೇಖರ (30) ಎಂಬ ರೌಡಿಶೀಟರ್‌ನನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಪತ್ನಿ ಜೋಸ್ಪಿನ್ ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಡು ತನಿಖೆ ನಡೆಸಿದಾಗ ತಮಿಳುನಾಡಿನ ಪೆನ್ನಾಗರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುಣಶೇಖರನ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ಬ್ರಿಜೇಶ್‍ನನ್ನು ಸೆರೆ ಹಿಡಿದಿದ್ದಾರೆ.

ಭಾರತೀನಗರ ಠಾಣೆಯ ರೌಡಿಶೀಟರ್ ಆಗಿರುವ ಬ್ರಿಜೇಶ್, ಪಂಜಾಬ್‍ನಲ್ಲಿ ನಕಲಿ ಚಿನ್ನ ತಂದು ಅದನ್ನು ಬಾಗಲೂರು ಠಾಣೆಯ ರೌಡಿಶೀಟರ್ ಗುಣಶೇಖರನ ಮೂಲಕ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ. ಅದೇ ರೀತಿ ತಂದ ನಕಲಿ ಚಿನ್ನವನ್ನು ಬ್ರಿಜೇಶ್ ಹಾಗೂ ಗುಣಶೇಖರ ಸೇರಿ ಗಣಶೇಖರನ ಸಂಬಂಧಿಯೊಬ್ಬರ ಮೂಲಕ ಫೈನಾನ್ಸ್ ಕಂಪೆನಿಯಲ್ಲಿ ಅಡವಿಟ್ಟು ಹಣ ಪಡೆದುಕೊಂಡಿದ್ದರು.

ನಕಲಿ ಚಿನ್ನವೆಂದು ತಿಳಿದ ಬಳಿಕ ಫೈನಾನ್ಸ್ ಕಂಪೆನಿಯವರು ಹಣ ವಾಪಸ್ ಮಾಡಿ, ಇಲ್ಲದಿದ್ದರೆ ಪೊಲೀಸರಿಗೆ ದೂರು ನೀಡುತ್ತೇವೆ ಎಂದು ಗುಣಶೇಖರನ ಸಂಬಂಧಿಗೆ ತಾಕೀತು ಮಾಡಿದ್ದರು. ಇದರಿಂದ ಕಂಗಾಲಾಗಿದ್ದ ಗುಣಶೇಖರ, ಹಣ ನೀಡುವಂತೆ ಬ್ರಿಜೇಶ್‍ನ ಮೇಲೆ ಒತ್ತಡ ಹಾಕಿದ್ದ ಎನ್ನಲಾಗಿದೆ.

ಇದಕ್ಕೆ ಕೋಪಗೊಂಡ ಬ್ರಿಜೇಶ್, ಜ.10ರಂದು ಹಣ ಕೊಡುವುದಾಗಿ ಬಾಗಲೂರು ವ್ಯಾಪ್ತಿಯ ಅಪಾರ್ಟ್‍ಮೆಂಟ್‍ಗೆ ಗುಣಶೇಖರನನ್ನು ಕರೆಸಿಕೊಂಡು ಬಳಿಕ ಆತನ ಮೇಲೆ ಎರಡು ಸುತ್ತು ಗುಂಡು ಹಾರಿಸಿ ಹತ್ಯೆಗೈದಿದ್ದ. ನಂತರ ತನ್ನ ಸಹಚರನನ್ನು ಕರೆಸಿಕೊಂಡು ಕಾರಿನಲ್ಲಿ ಗುಣಶೇಖರನ ಮೃತದೇಹವನ್ನು ತಮಿಳುನಾಡಿನ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಬೆಂಕಿಯಿಟ್ಟಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News