ಬೆಂಗಳೂರು | ಬಿಸಿಯೂಟ ತಯಾರಕರ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಧರಣಿ
ಬೆಂಗಳೂರು : ಬಿಸಿಯೂಟ ತಯಾರಕರ ವೇತನವನ್ನು ಕನಿಷ್ಠ 6 ಸಾವಿರ ರೂ.ಗಳಿಗೆ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ವತಿಯಿಂದ ಧರಣಿ ನಡೆಸಲಾಯಿತು.
ಕರ್ನಾಟಕ ರಾಜ್ಯದಲ್ಲಿ 23 ವರ್ಷಗಳಿಂದ ಸರಕಾರಿ ಮತ್ತು ಅನುದಾನಿತ ಕಿರಿಯ ಮತ್ತು ಹಿರಿಯ ಪ್ರಾಥಮಿಕ- ಪ್ರೌಢಶಾಲೆಗಳಲ್ಲಿ ಮಧ್ಯಾಹ್ನ ಉಪಹಾರ ಯೋಜನೆ ಅಡಿಯಲ್ಲಿ ಅಡುಗೆ ಕೆಲಸ ಮಾಡುತ್ತಿರುವ ಬಿಸಿಯೂಟ ತಯಾರಕ ಮಹಿಳೆಯರು ಅತ್ಯಂತ ಕಡಿಮೆ ಗೌರವ ಸಂಭಾವನೆಗೆ ದುಡಿಯುತ್ತಿದ್ದಾರೆ. ಮುಖ್ಯ ಅಡುಗೆಯವರಿಗೆ ಮಾಸಿಕ ರೂಪಾಯಿ 3,700 ಹಾಗೂ ಸಹಾಯಕ ಅಡುಗೆಯವರಿಗೆ ರೂಪಾಯಿ 3,600 ಮಾತ್ರ ಸಂಭಾವನೆ ಬರುತ್ತಿದೆ. ಆದ್ದರಿಂದ ಕೂಡಲೇ ವೇತನವನ್ನು ಹೆಚ್ಚಿಸಬೇಕು ಎಂದು ಧರಣಿನಿರತರು ಆಗ್ರಹಿಸಿದರು.
ಬಿಸಿಯೂಟ ತಯಾರಕರಿಗೆ ಮರಣ ಪರಿಹಾರ ಜಾರಿಗೊಳಿಸಬೇಕು. ನಿವೃತ್ತ ಬಿಸಿಯೂಟ ತಯಾರಕರಿಗೆ ಕನಿಷ್ಠ 2.5 ಲಕ್ಷ ರೂ. ಇಡುಗಂಟು ಏರಿಕೆ ಮಾಡಬೇಕು ಎಂದು ಆಗ್ರಹಿಸಿದರು.
1972ರ ಕಾರ್ಮಿಕ ಕಾಯ್ದೆಯ ಪ್ರಕಾರ ಗ್ರಾಚುಟಿ(ಉಪಧನ) ಜಾರಿಗೊಳಿಸಬೇಕು. ಮೊಟ್ಟೆ ಸುಲಿಯುವ ಭತ್ಯೆಯನ್ನು 1 ರೂ.ಗೆ ಹೆಚ್ಚಿಸಬೇಕು. ಆ ಭತ್ಯೆಯನ್ನು ನೇರವಾಗಿ ಅಡುಗೆ ಸಿಬ್ಬಂದಿಯ ಖಾತೆಗೆ ಹಾಕಬೇಕು ಎಂದು ಒತ್ತಾಯಿಸಿದರು.
ಬಿಸಿಯೂಟ ಯೋಜನೆಯನ್ನು ಖಾಸಗಿ ಸಂಸ್ಥೆಗಳಿಗೆ ಕೊಡುವ ಹುನ್ನಾರ ಕೈಬಿಡಬೇಕು. ಈಗಾಗಲೇ ಖಾಸಗಿ ಸಂಸ್ಥೆಗಳಿಗೆ ವಹಿಸಿರುವ ಬಿಸಿಯೂಟ ತಯಾರಿಕೆಯನ್ನು ರದ್ದುಗೊಳಿಸಿ ಶಾಲೆಯಲ್ಲಿಯೇ ಅಡುಗೆ ತಯಾರಿಕೆಗೆ ಅನುವು ಮಾಡಿಕೊಡಬೇಕು ಎಂದು ಧರಣಿನಿರತರು ಆಗ್ರಹಿಸಿದರು.
ಬಿಸಿಯೂಟ ತಯಾರಕರಿಗೆ ಪ್ರತಿ ತಿಂಗಳು 5ನೇ ತಾರೀಖಿಗೆ ವೇತನ ಪಾವತಿಸಬೇಕು. ರಾಜ್ಯದ ಕೆಲವು ಶಾಲೆಗಳಲ್ಲಿ ಬಿಸಿಯೂಟ ತಯಾರಕರಿಗೆ ವಿನಾಃ ಕಾರಣ ಕಿರುಕುಳ ನೀಡಲಾಗುತ್ತಿದೆ. ಜತೆಗೆ ಕಾರಣವಿಲ್ಲದೇ ಕೆಲಸದಿಂದ ಕೈ ಬಿಡಲಾಗುತ್ತಿದೆ. ಇದರಿಂದ 15-20 ವರ್ಷ ಕೆಲಸ ಮಾಡಿದ ಅಡುಗೆ ತಯಾರಕರಿಗೆ ತುಂಬಾ ಅನ್ಯಾಯವಾಗುತ್ತಿದೆ. ಶಾಲೆಯಲ್ಲಿ ಕರ್ತವ್ಯ ಲೋಪ ಎಸಗಿದವರಿಗೆ ಮಾತ್ರ ನೋಟೀಸ್ ನೀಡುವ ಮೂಲಕ ನಿಯಮಾನುಸಾರ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ಧರಣಿಯಲ್ಲಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್‍ನ ರಾಜ್ಯಾಧ್ಯಕ್ಷ ಹೊನ್ನಪ್ಪ ಮರೆಮ್ಮನವರ, ಪ್ರದಾನ ಕಾರ್ಯದರ್ಶಿ ಆವರಗೆರೆ ಚಂದ್ರು, ಖಜಾಂಚಿ ರುದ್ರಮ್ಮ ಬೆಳಲಗೆರೆ ಮತ್ತಿತರರು ಹಾಜರಿದ್ದರು.