ಬೆಂಗಳೂರು | ಚಿಪ್ಸ್ ಖರೀದಿಸಲು ಹೋದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಅಂಗಡಿ ಮಾಲಕ ವಶಕ್ಕೆ
ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ಚಿಪ್ಸ್ ಪ್ಯಾಕೇಟ್ ಖರೀದಿಸಲು ಹೋದಾಗ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಅಂಗಡಿ ಮಾಲಕನನ್ನು ಇಲ್ಲಿನ ಬಾಗಲಗುಂಟೆ ಠಾಣಾ ಪೊಲೀಸರು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.
ಜು.3ರ ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಈ ಸಂಬಂಧ ಎಂಟು ವರ್ಷದ ಬಾಲಕಿಯ ಪೋಷಕರು ನೀಡಿದ ದೂರು ಆಧರಿಸಿ ಬಾಗಲಗುಂಟೆ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಬಾಲಕಿಯು ಚಿಪ್ಸ್ ಪ್ಯಾಕೇಟ್ ಖರೀದಿಸಲು ತನ್ನ ಮನೆಯ ಸಮೀಪದ ಅಂಗಡಿಗೆ ಹೋಗಿದ್ದಳು. ಆಗ ಅಂಗಡಿಯಲ್ಲಿದ್ದ 25 ವರ್ಷದ ವ್ಯಕ್ತಿ, ಚಿಪ್ಸ್ ಪ್ಯಾಕೇಟ್ ಅನ್ನು ಪಕ್ಕದಲ್ಲಿರುವ ಗೋಡೌನ್‍ನಿಂದ ತರಬೇಕೆಂದು ಹೇಳಿದ್ದಾನೆ. ಚಿಪ್ಸ್ ನೀಡುವ ನೆಪದಲ್ಲಿ ಗೋಡೌನ್‍ಗೆ ಕರೆದೊಯ್ದು ಬಾಲಕಿಯ ಖಾಸಗಿ ಭಾಗಗಳನ್ನು ಸ್ಪರ್ಶಿಸಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸದ್ಯ ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿಯಲ್ಲಿ ಲೈಂಗಿಕ ದೌರ್ಜನ್ಯದ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಬಂಧಿಸಿ ವಿಚಾರಣೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.