Bengaluru | ವ್ಯಕ್ತಿಯೊಬ್ಬರ ಮಾರಣಾಂತಿಕ ಮೇಲೆ ಹಲ್ಲೆ: ಮೂವರ ಸೆರೆ
ಬೆಂಗಳೂರು : ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕವಾಗಿ ಹಲ್ಲೆಗೈದ ಪ್ರಕರಣದಡಿ ಮೂವರು ಆರೋಪಿಗಳನ್ನು ಇಲ್ಲಿನ ಅಶೋಕನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಕೇರಳ ಮೂಲದ ಬಸಿಲ್ ವರ್ಗೀಸ್, ತರಸ್ ರಾಜಿ ಹಾಗೂ ಸಂದೀಪ್ ಮಹಾದೇವನ್ ಬಂಧಿತರು ಎಂದು ಗುರುತಿಸಲಾಗಿದೆ. ಆರೋಪಿಗಳು ರಾತ್ರಿ ವೇಳೆ ಮನೆ ಮುಂದಿನ ರಸ್ತೆಯಲ್ಲಿ ಕುಳಿತಿದ್ದನ್ನು ಪ್ರಶ್ನಿಸಿದ್ದಕ್ಕೆ ಆಝಾದ್ ಎಂಬಾತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು ಎಂದು ಆರೋಪಿಸಲಾಗಿದೆ.
ಈ ಪ್ರಕರಣದ ಕುರಿತು ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಎಂ. ಹಕಾಯ್ ಮಾತನಾಡಿ, ಅಕ್ಟೋಬರ್ 22ರಂದು ಈ ಘಟನೆ ನಡೆದಿದ್ದು, ಆಝಾದ್ ಎಂಬುವರು ತನ್ನ ಮನೆಯ ಬಳಿ ರಾತ್ರಿ ವೇಳೆಗೆ ಊಟ ಮುಗಿಸಿಕೊಂಡು ನಡೆದುಕೊಂಡು ಓಡಾಡುತ್ತಿರುವಾಗ, ಅಲ್ಲಿ ಮೂವರು ಆರೋಪಿಗಳು ಯಾವುದೋ ಕೆಲಸಕ್ಕೆ ಬಂದಿರುತ್ತಾರೆ.
ಅವರು ಬಹಳಷ್ಟು ಸಮಯ ರಸ್ತೆಯಲ್ಲಿ ಕುಳಿತಿದ್ದನ್ನು ದೂರುದಾರ ಪ್ರಶ್ನಿಸಿದ್ದಾರೆ. ಈ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಹೊಡೆದಾಟ ಸಂಭವಿಸಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಎಂದು ತಿಳಿಸಿದ್ದಾರೆ. ಸದ್ಯ, ಈ ಬಗ್ಗೆ ಆಝಾದ್ ಅವರು ನೀಡಿದ ದೂರನ್ನು ಆಧರಿಸಿ ಪ್ರಕರಣ ದಾಖಲಿಸಿಕೊಂಡು ಮೂವರನ್ನು ಬಂಧಿಸಿ ಕ್ರಮ ಜುರುಗಿಸಲಾಗಿದೆ ಎಂದು ಡಿಸಿಪಿ ಅಕ್ಷಯ್ ಹೇಳಿದ್ದಾರೆ.