ಯುಜಿ ನೀಟ್: ಆಪ್ಶನ್ ದಾಖಲಿಸಲು ಡಿ.15ರವೆರೆಗೆ ಅವಧಿ ವಿಸ್ತರಣೆ
ಬೆಂಗಳೂರು : ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪದವಿ ಕೋರ್ಸ್‍ಗಳ ಪ್ರವೇಶಕ್ಕೆ ಸ್ಟ್ರೇ ವೇಕೆನ್ಸಿ ಸುತ್ತಿನಲ್ಲಿ ಭಾಗವಹಿಸಲು ಇಚ್ಛಿಸುವವರಿಗೆ ಆಪ್ಶನ್ ದಾಖಲಿಸಲು ಡಿ.15ರಂದು ಬೆಳಗ್ಗೆ 11 ಗಂಟೆವರೆಗೆ ದಿನಾಂಕ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಈ ಕುರಿತು ಪ್ರಕಟನೆ ನೀಡಿರುವ ಅವರು, ಆನ್‍ಲೈನ್ ಮೂಲಕ ವೈದ್ಯಕೀಯ ಕೋರ್ಸ್ ಶುಲ್ಕ ಪಾವತಿಸುವುದಕ್ಕೂ ಬ್ಯಾಂಕ್ ಖಾತೆ ನಂಬರ್ ನೀಡಿದ್ದು, ಅದರ ನಂತರ ಪಾವತಿ ವಿವರ ಹಾಗೂ ಸಿಇಟಿ ಸಂಖ್ಯೆಯನ್ನು keavikasana@gmail.comಗೆ ಇ-ಮೇಲ್ ಮಾಡಬೇಕು. ಅಥವಾ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಗೆ ಖುದ್ದು ತಲುಪಿಸಬೇಕು. ಅದರ ಬಳಿಕವೇ ಆಪ್ಶನ್ ದಾಖಲಿಗೆ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಸ್ಟ್ರೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಡಿ.15ರಂದು ಸಂಜೆ 4ಗಂಟೆ ನಂತರ ಪ್ರಕಟಿಸಲಾಗುತ್ತದೆ. 3ನೇ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿ, ಶುಲ್ಕ ಪಾವತಿಸಿ, ಸೀಟು ಖಾತರಿ ಚೀಟಿ ಡೌನ್‍ಲೋಡ್ ಮಾಡಿಕೊಂಡಿರುವ ಕೆಲವರು ಇನ್ನೂ ಕಾಲೇಜಿಗೆ ವರದಿ ಮಾಡಿಕೊಂಡಿಲ್ಲ. ಅಂತಹವರ ಪಟ್ಟಿಯನ್ನೂ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ. ಪ್ರವೇಶ ಪಡೆಯುವುದು ಕಡ್ಡಾಯವಾಗಿದ್ದು ಅಂತಹವರಿಗೆ ಡಿ.14ರವರೆಗೆ ಕಾಲೇಜಿಗೆ ವರದಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಒಂದು ವೇಳೆ ನಿಗದಿತ ಅವಧಿಯಲ್ಲಿ ಕಾಲೇಜಿಗೆ ವರದಿ ಮಾಡಿಕೊಳ್ಳದಿದ್ದರೆ ಡಿ.15ರಂದು ಬೆಳಗ್ಗೆ 9ಗಂಟೆಗೆ ಪ್ರಾಧಿಕಾರಕ್ಕೆ ಖುದ್ದು ಬಂದು ಕಾರಣ ತಿಳಿಸಬೇಕು. ನಂತರ ಅವರಿಂದ ತೆರವಾಗುವ ಸೀಟುಗಳನ್ನು ಸ್ಟ್ರೇ ವೇಕೆನ್ಸಿ ಸುತ್ತಿಗೆ ಪರಿಗಣಿಸಲಾಗುತ್ತದೆ ಎಂದು ತಿಳಿಸಿದ್ದಾರೆ.