×
Ad

ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ : ವಾಲ್ಮೀಕಿ ಗುರುಕುಲ ಪೀಠದ ಸ್ವಾಮೀಜಿ ಬ್ರಹ್ಮಾನಂದ ಗುರೂಜಿ ವಿರುದ್ಧ ಪ್ರಕರಣ ದಾಖಲು

Update: 2025-12-13 23:22 IST

ಬೆಂಗಳೂರು, ಡಿ.13: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕು ಮೆಳೆಕೋಟೆಯಲ್ಲಿರುವ ಮಹರ್ಷಿ ಶ್ರೀ ವಾಲ್ಮೀಕಿ ಗುರುಕುಲ ಪೀಠದ ಸ್ವಾಮೀಜಿ ಬ್ರಹ್ಮಾನಂದ ಗುರೂಜಿ ಮಹಿಳೆಯೊಬ್ಬರನ್ನು ಮಂಚಕ್ಕೆ ಕರೆದಿದ್ದು, ಈ ಬಗ್ಗೆ ಸಂತ್ರಸ್ತ ಮಹಿಳೆ ಕೊಟ್ಟ ದೂರಿನ ಅನ್ವಯ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರು ನೀಡಿದ ಮಹಿಳೆ ಮತ್ತು ಆಕೆಯ ಪತಿ ಸ್ವಾಮೀಜಿ ನಿವಾಸದ ಬಳಿಯೇ ವಾಸವಿದ್ದು, ಅವರ ಪರಿಚಯವಾಗಿತ್ತು ಎನ್ನಲಾಗಿದೆ. ಸ್ವಾಮೀಜಿ ಬ್ರಹ್ಮಾನಂದ ಗುರೂಜಿ ಅವರು ಮಹಿಳೆಗೆ ತಮ್ಮ ಪರಿಚಯದವರಿಂದ ಕಡಿಮೆ ಬೆಲೆಗೆ ನಿವೇಶನವನ್ನು ಕೊಡಿಸುವ ಭರವಸೆ ನೀಡಿದ್ದರು ಎನ್ನಲಾಗಿದೆ. 13 ಲಕ್ಷ ರೂ. ಮೌಲ್ಯದ ನಿವೇಶನವನ್ನು 12 ಲಕ್ಷ ರೂ.ಗೆ ಕೊಡಿಸುವುದಾಗಿ ಮಾತುಕತೆ ನಡೆಸಿದ್ದರು. ಆದರೆ, ತಮ್ಮ ಬಳಿ 8 ಲಕ್ಷ ರೂ. ಮಾತ್ರ ಇದೆ ಎಂದು ಮಹಿಳೆ ಹೇಳಿದ್ದರು. ಹೀಗಾಗಿ ಉಳಿದ ಹಣಕ್ಕೆ ಸಹಾಯ ಮಾಡುವುದಾಗಿ ಸ್ವಾಮೀಜಿ ಹೇಳಿದ್ದರು ಎಂಬ ಆರೋಪವಿದೆ. ಮಹಿಳೆ ಬಳಿಯಿದ್ದ 8 ಲಕ್ಷ ರೂ.ಗಳಲ್ಲಿ 5 ಲಕ್ಷ ರೂಪಾಯಿಯನ್ನು ಮುಂಗಡವಾಗಿ ಮೂರನೇ ವ್ಯಕ್ತಿಗೆ ಸ್ವಾಮೀಜಿ ಕೊಡಿಸಿದ್ದಾರೆ. ಆದರೆ ಒಂದು ವರ್ಷ ಕಳೆದರೂ ನಿವೇಶನ ನೀಡದೆ, ಮುಂಗಡ ಹಣವನ್ನೂ ವಾಪಸ್ ನೀಡದೇ ನಿರ್ಲಕ್ಷ್ಯವಹಿಸಲಾಗಿದೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ. ಒಂದು ವರ್ಷವಾದರೂ ನಿವೇಶನ ಕೊಡದ ಕಾರಣ ಹಣವನ್ನು ಮಹಿಳೆ ವಾಪಸ್ ಕೇಳಿದ್ದಾರೆ.

‘‘ರೂಂಗೆ ಬಾ ಹಣ ಕೊಡಿಸುತ್ತೇನೆ, ನಿನಗೆ ಹಣ ಬೇಕು, ನನಗೆ ಮಜಾ ಬೇಕು’’ ಎಂದು ಸ್ವಾಮೀಜಿ ಹೇಳಿದ್ದಾರೆ ಎಂಬ ಆಡಿಯೊ ವೈರಲ್ ಆಗಿದ್ದು, ಸ್ವಾಮೀಜಿಯ ಈ ಮಾತುಗಳನ್ನು ಮಹಿಳೆ ಮೊಬೈಲ್‌ನಲ್ಲಿ ಆಡಿಯೋ ಹಾಗೂ ವೀಡಿಯೊ ರೂಪದಲ್ಲಿ ಸಂಗ್ರಹಿಸಿ ಕೊಂಡಿದ್ದಾರೆ ಎಂದು ವರದಿಯಾಗಿದೆ.

ಸ್ವಾಮೀಜಿ ನಿರಂತರವಾಗಿ ಫೋನ್ ಕರೆ, ಆಡಿಯೋ ಮೆಸೇಜ್ ಹಾಗೂ ವೀಡಿಯೊ ಕಾಲ್ ಮಾಡಿ ಕಿರುಕುಳ ನೀಡಿದ್ದಾರೆ. ಅಲ್ಲದೇ ಒಂಟಿಯಾಗಿದ್ದ ವೇಳೆ ಮನೆಗೆ ಬಂದು ಕಿರುಕುಳ ನೀಡಿದ್ದಾರೆ. ಆಡಿಯೋ-ವೀಡಿಯೊಗಳನ್ನು ಡಿಲೀಟ್ ಮಾಡುವಂತೆ ಒತ್ತಡ ಹೇರಿದ್ದು, ಅದಕ್ಕಾಗಿ 50 ಸಾವಿರ ರೂ. ನೀಡುವ ಆಮಿಷವನ್ನೂ ಒಡ್ಡಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.

ಸ್ವಾಮೀಜಿಯಿಂದ ಪ್ರತಿ ದೂರು :

ಮಹಿಳೆ ಮತ್ತು ಆಕೆಯ ಕುಟುಂಬದವರು ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಬ್ರಹ್ಮಾನಂದ ಸ್ವಾಮೀಜಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ. ಹಣ ಕೊಡಬೇಕು. ಇಲ್ಲದಿದ್ದರೆ ನಿಮ್ಮ ಫೋಟೊ, ಆಡಿಯೊ, ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿ, ಹೆಸರು ಹಾಳು ಮಾಡುತ್ತೇವೆಂದು ಬೆದರಿಕೆಯೊಡ್ಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಸ್ವಾಮೀಜಿ ಉಲ್ಲೇಖಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News