×
Ad

Bengaluru | 60 ವರ್ಷದ ಪೈಲಟ್ ವಿರುದ್ಧ ಅತ್ಯಾಚಾರ ಆರೋಪ: ಎಫ್‍ಐಆರ್ ದಾಖಲು

Update: 2025-11-24 20:52 IST

ಬೆಂಗಳೂರು : ಖಾಸಗಿ ವಿಮಾನಯಾನ ಸಂಸ್ಥೆಯ 60 ವರ್ಷದ ಪೈಲಟ್‍ವೊಬ್ಬರು ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‍ನಲ್ಲಿ ತಂಗಿದ್ದಾಗ 26 ವರ್ಷದ ಕ್ಯಾಬಿನ್ ಸಿಬ್ಬಂದಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ನ.18ರಂದು ಈ ಘಟನೆ ನಡೆದಿದ್ದು, ಚಾರ್ಟರ್ಡ್ ವಿಮಾನದಲ್ಲಿ ಪ್ರಯಾಣದ ನಂತರ ವಿಶ್ರಾಂತಿ ಪಡೆಯುವ ವೇಳೆಯಲ್ಲಿ ಕೃತ್ಯ ಸಂಭವಿಸಿದೆ ಎಂದು ತಿಳಿದುಬಂದಿದೆ. ಆರೋಪಿ ಪೈಲಟ್‍ನನ್ನು ರೋಹಿತ್ ಸರನ್ ಎಂದು ಗುರುತಿಸಲಾಗಿದೆ.

ರೋಹಿತ್ ಸರನ್, ಸಂತ್ರಸ್ತೆಯಾದ ಕ್ಯಾಬಿನ್ ಸಿಬ್ಬಂದಿ ಮತ್ತು ಇನ್ನೊಬ್ಬ ಪೈಲಟ್-ಮೂವರು ಹೈದರಾಬಾದ್‍ನ ಬೇಗಂಪೇಟೆ ಮತ್ತು ಆಂಧ್ರಪ್ರದೇಶದ ಪುಟ್ಟಪರ್ತಿಯಿಂದ ವಿಮಾನದಲ್ಲಿ ಬಂದ ನಂತರ ಹೋಟೆಲ್ ತಲುಪಿದ್ದರು. ಮರುದಿನ ಅವರು ಪುಟ್ಟಪರ್ತಿಗೆ ಹಿಂತಿರುಗಬೇಕಿತ್ತು, ಹೀಗಾಗಿ ವಿಶ್ರಾಂತಿ ಪಡೆಯಲು ಹೋಟೆಲ್‍ನಲ್ಲಿ ಉಳಿದಿದ್ದರು. ಧೂಮಪಾನ ಮಾಡಲು ಹೊರಗೆ ಹೋಗುವ ನೆಪದಲ್ಲಿ ರೋಹಿತ್ ತನ್ನನ್ನು ತನ್ನ ಕೋಣೆಯ ಬಳಿಗೆ ಕರೆದೊಯ್ದ. ನಂತರ ಆತ ಬಲವಂತದಿಂದ ತನ್ನನ್ನು ಕೋಣೆಯೊಳಗೆ ಎಳೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ.

ಸಂತ್ರಸ್ತೆಯು ನವೆಂಬರ್ 20ರಂದು ಹೈದರಾಬಾದ್‍ನ ಬೇಗಂಪೇಟೆಗೆ ಹಿಂದಿರುಗಿದ ನಂತರ ತಕ್ಷಣವೇ ವಿಮಾನಯಾನ ಕಂಪೆನಿಯ ಆಡಳಿತ ಮಂಡಳಿಗೆ ಈ ಘಟನೆಯ ಬಗ್ಗೆ ಮಾಹಿತಿ ನೀಡಿದರು. ನಂತರ, ಅವರು ಬೇಗಂಪೇಟ್ ಪೊಲೀಸ್ ಠಾಣೆಯಲ್ಲಿ ಝೀರೋ ಎಫ್‍ಐಆರ್ ದಾಖಲಿಸಿದರು. ಇದು ಯಾವುದೇ ನ್ಯಾಯವ್ಯಾಪ್ತಿಯನ್ನು ಲೆಕ್ಕಿಸದೆ ಪ್ರಕರಣವನ್ನು ದಾಖಲಿಸಲು ಅವಕಾಶ ನೀಡುತ್ತದೆ.

ಇನ್ನು, ಈ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಬೆಂಗಳೂರು ಪೊಲೀಸರಿಗೆ ವರ್ಗಾಯಿಸಲಾಗಿದ್ದು, ಬೆಂಗಳೂರಿನ ಹಲಸೂರು ಪೊಲೀಸ್ ಠಾಣೆಯಲ್ಲಿ ಬಿಎನ್‍ಎಸ್ ಸೆಕ್ಷನ್ 63ರ ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News