×
Ad

Bengaluru | ಕೇಂದ್ರ ಸರಕಾರದ ನೀತಿ, ರಾಜ್ಯ ಸರಕಾರದ ಧೋರಣೆಗಳ ವಿರುದ್ಧ ರೈತ-ಕಾರ್ಮಿಕರ ಪ್ರತಿಭಟನೆ

Update: 2025-11-26 19:43 IST

ಬೆಂಗಳೂರು : ದೇವನಹಳ್ಳಿ ಭೂಸ್ವಾಧೀನ ರದ್ದು ಘೋಷಣೆಯನ್ನು ಕೂಡಲೇ ಗೆಜೆಟ್‍ನಲ್ಲಿ ಪ್ರಕಟಿಸುವುದು ಸೇರಿ, ಕೇಂದ್ರ ಸರಕಾರದ ನೀತಿ ಮತ್ತು ರಾಜ್ಯ ಸರಕಾರದ ಧೋರಣೆಗಳ ವಿರುದ್ಧ ಸಂಯುಕ್ತ ಹೋರಾಟ-ಕರ್ನಾಟಕ, ಸಂಯುಕ್ತ ಕಿಸಾನ್ ಮೋರ್ಚಾ, ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯ ವತಿಯಿಂದ ನಗರದ ಫ್ರೀಡಂ ಪಾರ್ಕ್‍ನಲ್ಲಿ ರೈತ, ಕಾರ್ಮಿಕರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ.

ಈ ವೇಳೆ ಮಾತನಾಡಿದ ಕಾರ್ಮಿಕ ಮುಖಂಡ ಪ್ರೊ.ಬಾಬು ಮ್ಯಾಥ್ಯೂ, ಸಂವಿಧಾನ ನಂಬಿಕೊಂಡಿರುವ ರೈತರು ಮತ್ತು ಕಾರ್ಮಿಕರ ಐಕ್ಯತೆ ಮುರಿಯುವ ಯತ್ನ ದೇಶದಲ್ಲಿ ನಡೆಯುತ್ತಿದೆ. ಈಗ ಜಾರಿಯಾಗಿರುವ ಕಾರ್ಮಿಕ ವಿರೋಧಿ ಕಾಯ್ದೆಗಳು ಸಾಕಷ್ಟು ಅಮಾನವೀಯವಾಗಿವೆ. ಇನ್ನು ಮುಂದೆ ಕಾರ್ಮಿಕರು ಕಾನೂನು ಹೋರಾಟ ಮಾಡಲು ಸಾಧ್ಯವಿಲ್ಲ. ಹೋರಾಟ ಮಾಡಿದರೆ ಅದು ಕಾನೂನು ಬಾಹಿರ ಆಗುತ್ತದೆ. ಕಾರ್ಮಿಕರ ಯೂನಿಯನ್‍ಗಳು ನಿಷೇಧ ಆಗುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.

ಹಳೆಯ ಕಾರ್ಮಿಕ ಕಾನೂನುಗಳ ಮೇಲೆ ನಮಗೆ ಹಿಡಿತ ಇತ್ತು. ಆದರೆ ಹೊಸ ಕಾರ್ಮಿಕ ಕಾನೂನುಗಳ ಪ್ರಕಾರ ಯಾವಾಗ ಬೇಕಾದರೂ ಕಾರ್ಮಿಕರನ್ನು ಕೆಲಸದಿಂದ ತೆಗೆಯಬಹುದು. ಇದು ಕಾನೂನು ಬಾಹಿರ ಎಂಬುದನ್ನು ಮರೆಯಬಾರದು ಎಂದು ಅಭಿಪ್ರಾಯಪಟ್ಟರು.

ಜನಶಕ್ತಿಯ ನೂರ್ ಶ್ರೀಧರ್ ಮಾತನಾಡಿ, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ರೈತರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ. ಬಿಜೆಪಿ ಸರಕಾರ ರೂಪಿಸಿದ ಎಲ್ಲ ಕಾನೂನುಗಳನ್ನು ವಿರೋಧ ಪಕ್ಷವಿದ್ದಾಗ ವಿರೋಧ ಮಾಡಿ, ಈಗ ನೀವು ಏನು ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಎಪಿಎಂಸಿ ಕಾಯ್ದೆಗೆ ಸ್ವಲ್ಪ ತಿದ್ದುಪಡಿ ಮಾಡಿದ್ದು ಬಿಟ್ಟರೆ ಎಲ್ಲ ಕಾನೂನುಗಳೂ ಹಾಗೆಯೇ ಇವೆ. ಪ್ರಜಾತಂತ್ರವನ್ನು ಬುಡಮೇಲು ಮಾಡುವ, ವಿರೋಧ ಪಕ್ಷಗಳು ಅಧಿಕಾರಕ್ಕೆ ಬರಲೇಬಾರದು ಎಂದು ಎಸ್‍ಐಆರ್ ಕಾಯ್ದೆ ಜಾರಿ ಮಾಡುತ್ತಿದ್ದಾರೆ. ಜಾತ್ಯತೀತ ಮತದಾರರ ಹೆಸರುಗಳನ್ನ ಶೇ.15ರಷ್ಟು ಅಳಿಸುತ್ತಿದ್ದಾರೆ, ಇಷ್ಟೆಲ್ಲಾ ಆದರೂ ಕರ್ನಾಟಕದ ಕಾಂಗ್ರೆಸ್ ಸರಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ-ಹಸಿರು ಸೇನೆಯ ಎಚ್.ಆರ್.ಬಸವರಾಜಪ್ಪ, ಕರ್ನಾಟಕ ಪ್ರಾಂತ ರೈತ ಸಂಘದ ಯು.ಬಸವರಾಜು, ಸಿಐಟಿಯುನ ಮೀನಾಕ್ಷಿ ಸುಂದರಂ, ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಕುಮಾರ್ ಸಮತಳ, ಸಂಯುಕ್ತ ಹೋರಾಟದ ಬಡಗಲಪುರ ನಾಗೇಂದ್ರ, ಎಐಯುಟಿಯುಸಿ ಕೆ.ವಿ.ಭಟ್ ಮತ್ತಿತರರು ಹಾಜರಿದ್ದರು.

ಪ್ರಮುಖ ಹಕ್ಕೊತ್ತಾಯಗಳು

ಕೇಂದ್ರ ಸರಕಾರದ 4 ಕಾರ್ಮಿಕ ಸಂಹಿತೆಗಳು ಮತ್ತು ಶ್ರಮ ಶಕ್ತಿ ನೀತಿ2025ನ್ನು ರದ್ದು ಪಡಿಸಬೇಕು. ಈ ಜನ ವಿರೋಧಿ ನೀತಿಗಳನ್ನು ರಾಜ್ಯದಲ್ಲಿ ಜಾರಿ ಮಾಡುವುವುದಿಲ್ಲ ಎಂದು ರಾಜ್ಯ ಸರಕಾರವು ವಿಧಾನಸಭೆಯಲ್ಲಿ ನಿರ್ಣಯಿಸಿ ತಿರಸ್ಕರಿಸಬೇಕು. ದೇವನಹಳ್ಳಿ ಭೂಸ್ವಾಧೀನ ರದ್ದು ಘೋಷಣೆಯನ್ನು ಕೂಡಲೇ ಗೆಜೆಟ್‍ನಲ್ಲಿ ಪ್ರಕಟಿಸಬೇಕು. ಅರಣ್ಯವಾಸಿಗಳನ್ನು ಸದಾ ಒಕ್ಕಲೇಳುವ ಆತಂಕದಿಂದ ಪಾರು ಮಾಡಬೇಕು. ಎಲ್ಲ ಆದಿವಾಸಿ, ಅರಣ್ಯವಾಸಿಗಳಿಗೆ ಭೂಮಿ ಹಕ್ಕು ನೀಡಬೇಕು. ಬಗರ್ ಹುಕುಂ ರೈತರನ್ನು ಒಕ್ಕಲೆಬ್ಬಿಸಬಾರದು. ಸರ್ಜಾಪುರ ಹೋಬಳಿಯ ಆಂಧೇನಳ್ಳಿ, ಮುತ್ತೆನಲ್ಲೂರು, ಸೊಳ್ಳೆಪುರ ಮುಂತಾದ ಗ್ರಾಮಗಳಲ್ಲಿ ಫಲವತ್ತಾದ ಭೂಮಿಯನ್ನು ಬಲವಂತವಾಗಿ ಸ್ವಾಧೀನ ಪಡಿಸಿ ಕೊಳ್ಳುತ್ತಿರುವುದನ್ನು ಕೈಬಿಡಬೇಕು. ಮೆಕ್ಕೆ ಜೋಳವನ್ನು ಕನಿಷ್ಟ ಬೆಂಬಲ ಬೆಲೆಯಲ್ಲಿ ಕೊಳ್ಳಲು ಕೇಂದ್ರ ಸರಕಾರ ಮುಂದೆ ಬರಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಹಕ್ಕೊತ್ತಾಯ ಮಂಡಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News