×
Ad

Bengaluru | ಬಾಲಕರಿಗೆ ಲೈಂಗಿಕ ಕಿರುಕುಳ ಆರೋಪ ಪ್ರಕರಣದಲ್ಲಿ ಪಿಎಸ್ಸೈ ಬಂಧನ

Update: 2026-06-30 23:52 IST

ಸಾಂದರ್ಭಿಕ ಚಿತ್ರ

ಬೆಂಗಳೂರು : ಕೊಲೆ ಪ್ರಕರಣದಲ್ಲಿ ವಶಕ್ಕೆ ಪಡೆದುಕೊಂಡಿದ್ದ ಅಪ್ರಾಪ್ತ ಬಾಲಕರನ್ನು ವಿಕೃತ ಲೈಂಗಿಕ ಕ್ರಿಯೆಗೆ ಒತ್ತಾಯಿಸಿ ದೌರ್ಜನ್ಯವೆಸಗಿದ ಆರೋಪದಡಿ ಅಮೃತಹಳ್ಳಿ ಪೊಲೀಸ್ ಠಾಣೆಯ ಪಿಎಸ್‍ಐ ಪ್ರವೀಣ್ ಅವರನ್ನು ಕೊತ್ತನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪಿಎಸ್‍ಐ ಪ್ರವೀಣ್ ವಿರುದ್ಧ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ, (ಪೊಕ್ಸೊ), ಬಾಲನ್ಯಾಯ ಕಾಯ್ದೆ ಹಾಗೂ ಅಸಭ್ಯ ವರ್ತನೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಒಂದು ವರ್ಷದ ಹಿಂದೆ ನಡೆದಿದ್ದ ಕೊಲೆ ಪ್ರಕರಣದಲ್ಲಿ ಅಪ್ರಾಪ್ತ ಬಾಲಕರನ್ನು ಪಿಎಸ್‍ಐ ಪ್ರವೀಣ್ ವಶಕ್ಕೆ ಪಡೆದಿದ್ದರು. ಲಾಡ್ಜ್‌ ವೊಂದರಲ್ಲಿ ವಿಚಾರಣೆ ನಡೆಸುವಾಗ ಪಿಎಸ್‍ಐ ಪ್ರವೀಣ್ ವಿಕೃತಿ ಎಸಗಿದ್ದಾರೆ. ಘಟನೆ ನಡೆದ ಒಂದು ವರ್ಷದ ಬಳಿಕ ವಿಡಿಯೋ ಸೋರಿಕೆಯಾಗಿ ಎರಡು ದಿನಗಳ ಹಿಂದೆ ವೈರಲ್ ಆಗಿತ್ತು. ಆ ಬಳಿಕ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.

ವಿಡಿಯೋ ವೈರಲ್ ಬೆನ್ನಲೇ ಪ್ರವೀಣ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಜೊತೆಗೆ ಕೃತ್ಯದ ವೇಳೆ ಸಹಕರಿಸಿದ್ದ ಕಾನ್ಸ್‌ ಟೇಬಲ್ ರಾಘವೇಂದ್ರ ಅವರ ಮೇಲೆ ಇಲಾಖಾ ತನಿಖೆ ಕೈಗೊಂಡು ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.

 

ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಎರಡು ದಿನದ ಹಿಂದೆ ಪಿಎಸ್‍ಐ ಅವರನ್ನು ಅಮಾನತು ಮಾಡಲಾಗಿದೆ. ಇಂತಹ ವ್ಯಕ್ತಿಗಳು ಪೊಲೀಸ್ ಇಲಾಖೆಗೆ ಹೇಗೆ ಆಯ್ಕೆಯಾಗುತ್ತಾರೆ. ಅವರು ತೀರಾ ಅಸಹ್ಯವಾಗಿ ನಡೆದುಕೊಂಡಿದ್ದಾರೆ.

-ಪ್ರಿಯಾಂಕ್ ಖರ್ಗೆ, ಗೃಹ ಸಚಿವ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News