×
Ad

ಸಂಸದ ಶ್ರೇಯಸ್ ಪಟೇಲ್ ಆಯ್ಕೆ ಅಸಿಂಧು ಕೋರಿದ ಅರ್ಜಿ; ದೊಡ್ಡ‌ನೆಕ್ಕುಂದಿ ಸಹಾಯಕ ಕಂದಾಯ ಅಧಿಕಾರಿಗೆ ಜಾಮೀನು ಸಹಿತ ವಾರಂಟ್

Update: 2026-07-01 00:01 IST

ಬೆಂಗಳೂರು: ಕಳೆದ ಲೋಕಸಭೆ ಚುನಾವಣೆಯಲ್ಲಿ‌ ಹಾಸನ ಕ್ಷೇತ್ರದಿಂದ ಕಾಂಗ್ರೆಸ್‌ನ ಶ್ರೇಯಸ್‌ ಎಂ. ಪಟೇಲ್‌ ಅವರ ಆಯ್ಕೆ ಅಸಿಂಧುಗೊಳಿಸುವಂತೆ ಕೋರಿರುವ ಅರ್ಜಿಯ ಸಾಕ್ಷ್ಯ ನುಡಿಯುವುದಕ್ಕೆ ನ್ಯಾಯಾಲಯಕ್ಕೆ ಹಾಜರಾಗದ ಕೆ.ಆರ್.ಪುರ ಹೋಬಳಿಯ ದೊಡ್ಡನೆಕ್ಕುಂದಿ ಸಹಾಯಕ ಕಂದಾಯ ಅಧಿಕಾರಿಗೆ ಹೈಕೋರ್ಟ್ ಜಾಮೀನು ಸಹಿತ ವಾರಂಟ್ ಜಾರಿ ಮಾಡಿದೆ.

ಸಂಸದ ಶ್ರೇಯಸ್‌ ಪಟೇಲ್‌ ಆಯ್ಕೆ ಅಸಿಂಧು ಕೋರಿ ವಕೀಲ ದೇವರಾಜೇಗೌಡ ಅವರ ಪುತ್ರ ಡಿ. ಚರಣ್‌ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಹಾಸನ ಕ್ಷೇತ್ರದ ಚುನಾವಣಾ ಕರ್ತವ್ಯದಲ್ಲಿದ್ದ ಬೆಂಗಳೂರಿನ ಕೆ.ಆರ್. ಪುರ ಹೋಬಳಿಯ ದೊಡ್ಡನೆಕ್ಕುಂದಿ ಹಾಲಿ ಸಹಾಯಕ ಕಂದಾಯ ಅಧಿಕಾರಿಗೆ ಸಾಕ್ಷಿ ಸಮನ್ಸ್ (ವಿಟ್ನೆಸ್ ಸಮನ್ಸ್) ನೀಡಲಾಗಿತ್ತು. ಅದರ ಹೊರತಾಗಿಯೂ ಅವರು ವಿಚಾರಣೆಗೆ ಗೈರಾಗಿದ್ದಾರೆ. ಆದ್ದರಿಂದ, ಅವರಿಗೆ ಜಾಮೀನು ಸಹಿತ ವಾರಂಟ್ ಜಾರಿ ಮಾಡಲಾಗುತ್ತಿದೆ ಎಂದು ಆದೇಶಿಸಿತಲ್ಲದೆ, ಸಹಾಯಕ ಕಂದಾಯ ಅಧಿಕಾರಿ ಜುಲೈ 8ರಂದು ವಿಚಾರಣೆಗೆ ಹಾಜರಾಗಬೇಕು.‌ ಅವರು 10 ಸಾವಿರ ರೂ. ಮೊತ್ತದ ವೈಯಕ್ತಿಕ ಬಾಂಡ್ ನೀಡಬೇಕು ಎಂದು ನಿರ್ದೇಶಿಸಿತು.

ಜತೆಗೆ, ಪ್ರಕರಣದ ಸಾಕ್ಷಿಗಳಾದ ಹಾಸನದ ಹೊಳೆನರಸೀಪುರದ ಸಬ್ ರಿಜಿಸ್ಟ್ರಾರ್, ಹೊಳೆನರಸೀಪುರ ಪುರಸಭೆಯ ಮುಖ್ಯ ಅಧಿಕಾರಿ, ಜೀ ನ್ಯೂಸ್ ಕನ್ನಡ ಸುದ್ದಿ ವಾಹಿನಿಯ ವ್ಯವಸ್ಥಾಪಕ ನಿರ್ದೇಶಕರಿಗೆ ಸಮನ್ಸ್ ಜಾರಿ ಮಾಡಿದ ನ್ಯಾಯಪೀಠ, ಈ ಸಾಕ್ಷಿಗಳು, 2025 ಅಕ್ಟೋಬರ್ 10ರ ಸಾಕ್ಷಿಗಳ ಪಟ್ಟಿಯಲ್ಲಿ ತೋರಿಸಲಾದ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಜುಲೈ 8ಕ್ಕೆ ಮುಂದೂಡಿತು.

ಪ್ರಕರಣವೇನು?

ಶ್ರೇಯಸ್‌ ಪಟೇಲ್‌ ಅವರ ನಾಮಪತ್ರ ಕ್ರಮಬದ್ಧವಾಗಿಲ್ಲ. ಅವರು ಹಿಂದಿನ 5 ವರ್ಷಗಳ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಸಿಲ್ಲ.‌ ಆ ಕುರಿತು ಪ್ರಮಾಣಪತ್ರದಲ್ಲಿ ಸಂಪೂರ್ಣ ಮಾಹಿತಿ ನೀಡಿಲ್ಲ. ಚುನಾವಣಾ ವೆಚ್ಚದ ಬಗ್ಗೆಯೂ ತಪ್ಪು ಮಾಹಿತಿ ನೀಡಿದ್ದಾರೆ. ನಿಗದಿತ ಮಿತಿಗಿಂತ ಹೆಚ್ಚು ಹಣವನ್ನು ಖರ್ಚು ಮಾಡಿದ್ದಾರೆ. ಆ ಕುರಿತು ಸರಿಯಾದ ಲೆಕ್ಕವನ್ನೂ ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡಿಲ್ಲ. ಆದ್ದರಿಂದ, ಶ್ರೇಯಸ್ ಪಟೇಲ್ ಆಯ್ಕೆಯನ್ನು ಅನೂರ್ಜಿತಗೊಳಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News