ಕೊಲೆ ಪ್ರಕರಣ: 8 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ, 3.90ಲಕ್ಷ ರೂ.ದಂಡ
ಸಾಂದರ್ಭಿಕ ಚಿತ್ರ
ಬೆಂಗಳೂರು : ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ 8 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 3.90 ಲಕ್ಷ ರೂ. ದಂಡ ವಿಧಿಸಿ ನ್ಯಾಯಾಲಯವು ಆದೇಶ ಹೊರಡಿಸಿದೆ ಎಂದು ಅಶೋಕನಗರ ಠಾಣಾ ಪೊಲೀಸರು ತಿಳಿಸಿದ್ದಾರೆ.
ಶಾಂತಿನಗರದಲ್ಲಿ 2017ರ ಅ.1ರಂದು ವಿಜಯದಶಮಿ ಹಬ್ಬದಂದು ರಾತ್ರಿ ಸಮಯದಲ್ಲಿ ದೇವರ ಪಲ್ಲಕ್ಕಿ ಉತ್ಸವದ ನಡೆಯುವಾಗ ಹರೀಶ್ ಎಂಬುವವನ್ನು ಕೊಲೆ ಮಾಡಲಾಗಿತ್ತು. 8 ಜನ ಆರೋಪಿಗಳು ಹಾಗೂ ಕಾನೂನು ಸಂಘರ್ಷಕ್ಕೊಳಗಾದ 3 ಜನ ಬಾಲಕರು ಸೇರಿದಂತೆ ಒಟ್ಟು 11 ಜನ ಆರೋಪಿಗಳು ಲಾಂಗ್ ಮತ್ತು ಚಾಕು, ಮಾರಾಕಾಸ್ತ್ರಗಳಿಂದ ಹೊಡೆದು ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದರು. ಈ ಬಗ್ಗೆ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಒಟ್ಟು 8 ಜನ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ. ಕಾನೂನು ಸಂಘರ್ಷಕ್ಕೊಳಗಾದ 3 ಜನ ಬಾಲಕರನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗಿತ್ತು.
ಪ್ರಕರಣದಲ್ಲಿ ಅಂದಿನ ಪ್ರಾಥಮಿಕ ತನಿಖಾಧಿಕಾರಿಯಾಗಿ ಅಶೋಕನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಆಗಿದ್ದ ವಿಜಯ್ ಹಡಗಲಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಅಂತಿಮವಾಗಿ ಇಂದಿನ ಪೊಲೀಸ್ ಇನ್ಸ್ ಪೆಕ್ಟರ್ ಎಸ್.ಡಿ.ಶಶಿಧರ್ ನ್ಯಾಯಾಲಯಕ್ಕೆ 8 ಜನ ಆರೋಪಿಗಳ ವಿರುದ್ಧ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.
ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, ನ್ಯಾಯಾಧೀಶರು 8 ಆರೋಪಿಗಳನ್ನು ಅಪರಾಧಿಗಳೆಂದು ತೀರ್ಪು ನೀಡಿ, ಜೀವಾವಧಿ ಶಿಕ್ಷೆಯನ್ನು ಹಾಗೂ ಒಟ್ಟು 3,90,000 ರೂ. ದಂಡ ವಿಧಿಸಿದ್ದಾರೆ. ದಂಡದ ಮೊತ್ತವನ್ನು ಮೃತ ಹರೀಶ್‍ನ ತಾಯಿ, ಪತ್ನಿ ಹಾಗೂ ಮಗನಿಗೆ ನೀಡುವಂತೆ ಆದೇಶ ಮಾಡಿದ್ದಾರೆ ಎಂದು ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.