ಬೆಂಗಳೂರು : ಎಚ್.ಡಿ.ಕುಮಾರಸ್ವಾಮಿ ಪ್ರಚಾರದಲ್ಲಿ ಇರಬೇಕೆಂದು ನಿರಂತರವಾಗಿ ಕಾಂಗ್ರೆಸ್ ನಾಯಕರನ್ನು ಕಚ್ಚುವ ಕೆಲಸ ಮಾಡುತ್ತಿದ್ದಾರೆ. ಹಿಂದೆ ಪೆನ್‍ಡ್ರೈವ್ ಬಿಡುತ್ತೇನೆ ಎಂದಿದ್ದರು. ಆದರೆ, ಇದುವರೆಗೂ ಅವರು ಪೆನ್‍ಡ್ರೈವ್ ಬಿಡಲಿಲ್ಲ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಲೇವಡಿ ಮಾಡಿದ್ದಾರೆ.

ಮಂಗಳವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿಯವರೇ, ನಿಮ್ಮ ಬಳಿ ಅಲ್ಲೋಲ ಕಲ್ಲೋಲ ಆಗುವ ದಾಖಲೆಗಳಿದ್ದರೆ ಅದಕ್ಕೆ 10 ದಿನ ಏಕೆ ಸಮಯ ಕೊಡುತ್ತೀರಾ? ಎಂದು ಪ್ರಶ್ನಿಸಿದರು.

2024ರಿಂದ ಆಗಸ್ಟ್ 2026ರವರೆಗೆ ಕುಮಾರಸ್ವಾಮಿವರು 148 ಪತ್ರಿಕಾಗೋಷ್ಠಿಗಳನ್ನು ನಡೆಸಿದ್ದಾರೆ. ಈ ಮೂಲಕ ಜೆಡಿಎಸ್ ಬದುಕಿದೆ ಎಂದು ತೋರಿಸಲು ಪರದಾಡುತ್ತಿದ್ದಾರೆ. 2028ರ ಚುನಾವಣೆ ಗಮನದಲ್ಲಿ ಇಟ್ಟುಕೊಂಡು ಬಿಜೆಪಿಯವರನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಲಕ್ಷ್ಮಣ್ ಟೀಕಿಸಿದರು.

ಪ್ರಿಯಾಂಕ್ ಖರ್ಗೆ ಅವರು ಕೆಪಿಎಸ್‍ಸಿ ಹಗರಣದಲ್ಲಿ ನನ್ನ ಪಾತ್ರ ಕಿಂಚಿತ್ತು ಸಾಬೀತಾದರೂ ನಾನು ಹಾಗೂ ನನ್ನ ಕುಟುಂಬದವರು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ಇದಕ್ಕೆ ಕುಮಾರಸ್ವಾಮಿ ಸಿದ್ದರಿದ್ದಾರೆಯೇ? ಎಂದು ಲಕ್ಷ್ಮಣ್ ಸವಾಲೆಸೆದರು.

ಎಚ್.ಡಿ.ಕುಮಾರಸ್ವಾಮಿ ಅವರೇ ಅಮೇರಿಕಾಗೆ ಹೋಗಿ ತಯಾರಾಗಿ ಬಂದು ಸುದ್ದಿ ಸ್ಪೋಟ ಮಾಡಲು ಮುಂದಾಗುತ್ತಾರಂತೆ. ಅವರು ಎಂದಿಗೂ ಸ್ಪೋಟಿಸಿದ ಉದಾಹರಣೆಯಿಲ್ಲ ಎಂದು ಲಕ್ಷ್ಮಣ್ ಲೇವಡಿ ಮಾಡಿದರು.

ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಕಾಲದಲ್ಲಿ 24 ಎಇಇ ಹುದ್ದೆಗೆ ನೇಮಕಾತಿ ಕರೆಯಲಾಗಿತ್ತು. ಅಂದು ಶಿವಶಂಕರಪ್ಪ ಸಾಹುಕಾರ್ ಅವರನ್ನು ನೇಮಕ ಮಾಡಿದ್ದು ಯಡಿಯೂರಪ್ಪ. ಶಿವಶಂಕರಪ್ಪನ ಮನೆಯಲ್ಲಿ ನಾಲ್ಕು ಕಡೆ ಯಡಿಯೂರಪ್ಪ, ವಿಜಯೇಂದ್ರ ಫೋಟೋಗಳಿವೆ ಎಂದು ಲಕ್ಷ್ಮಣ್ ತಿಳಿಸಿದರು.

ಈಗ ಕೆಪಿಎಸ್‍ಸಿ ಹಗರಣದಲ್ಲಿ ಸಿಲುಕಿರುವ ಬಸವರಾಜ ಕನ್ನಾಳಿಯನ್ನು ನೇಮಕ ಮಾಡಿಕೊಂಡಿದ್ದೂ ಇವರೇ. ಈತ ವಿಜಯೇಂದ್ರ, ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್, ಅಶ್ವಥ್ ನಾರಾಯಣ್, ಆರ್.ಅಶೋಕ್ ಜೊತೆ ಆತ್ಮೀಯವಾಗಿ ಫೋಟೋ ತೆಗೆದುಕೊಂಡಿದ್ದಾನೆ. ಈತನನ್ನು ತುಮಕೂರು ವಿವಿ ಸಿಂಡಿಕೇಟ್ ಸದಸ್ಯನನ್ನಾಗಿ ಮಾಡಿದ್ದು ಯಾರು? ಎಂದು ಲಕ್ಷ್ಮಣ್ ಪ್ರಶ್ನಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಎಸ್.ಮನೋಹರ್ ಇದ್ದರು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor