‘ಮನುಷ್ಯತ್ವದಡೆಗೆ ಸಮುದಾಯ ಜಾಥಾ’ಗೆ ಸಂಘ ಪರಿವಾರದಿಂದ ಅಡ್ಡಿ ಖಂಡನೀಯ : ಸಮುದಾಯ ಕರ್ನಾಟಕ
ಸಾಂದರ್ಭಿಕ ಚಿತ್ರ
ಬೆಂಗಳೂರು : ಧಾರವಾಡದ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಆ.30ರಂದು ನಡೆದ ‘ಸಮುದಾಯ-50- ಮನುಷ್ಯತ್ವದಡೆಗೆ ಸಮುದಾಯ ಜಾಥಾ’ದ ಸಮಾರೋಪ ಸಮಾರಂಭಕ್ಕೆ ಸಂಘ ಪರಿವಾರದವರಿಂದ ಆದ ಅಡ್ಡಿಯನ್ನು ಸಮುದಾಯ ಕರ್ನಾಟಕ ಹಾಗೂ ನಾಡಿನ ಸಾಹಿತಿ ಕಲಾವಿದರು ಖಂಡಿಸಿದ್ದಾರೆ.
ಈ ಕುರಿತು ಮನೋಜ್ ವಾಮಂಜೂರು, ಡಾ.ಎಚ್.ಜನಾರ್ಧನ್, ಡಾ.ಕೆ ಮರುಳ ಸಿದ್ದಪ್ಪ, ಡಾ.ಎಲ್.ಹನುಮಂತಯ್ಯ, ಪ್ರೊ.ಎಸ್.ಜಿ ಸಿದ್ದರಾಮಯ್ಯ, ಡಾ.ವಸುಂಧರಾ ಭೂಪತಿ, ಡಾ. ಎನ್.ಗಾಯತ್ರಿ ಮಾವಳ್ಳಿ ಶಂಕರ್, ಡಾ. ಬಂಜಗೆರೆ ಜಯಪ್ರಕಾಶ್, ಡಾ.ಎಲ್ ಎನ್ ಮುಕುಂದರಾಜ್ ಸೇರಿ ಇತರರು ಪ್ರಕಟನೆ ನೀಡಿದ್ದಾರೆ.
ಸಮುದಾಯ ಸಾಂಸ್ಕೃತಿಕ ಸಂಘಟನೆಯು ಈ ನಾಡಿನ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪ್ರಜೆಯಾಗಿ 50 ವರ್ಷಗಳಿಂದ ನಿರಂತರ ಚಳವಳಿಗಳನ್ನು ರೂಪಿಸುತ್ತಾ ಬಂದಿದೆ. ಈ ಚಳವಳಿಯ ನೆನಪಿನ ಭಾಗವಗಿ ನಡೆದ ಸಮಾರೋಪ ಸಮಾರಂಭದಲ್ಲಿ ವಿಶ್ರಾಂತ ನ್ಯಾಯಮೂರ್ತಿ ಡಾ.ಎಚ್.ಎನ್ ನಾಗಮೋಹನ ದಾಸ್ ಅವರು ಮತ್ತು ಬಹುಭಾಷ ನಟ ಪ್ರಕಾಶ್ ರಾಜ್ ಅವರು ಭಾಗವಹಿಸಿದ್ದರು. ಪ್ರಕಾಶ್ ರಾಜ್ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂದು ಅಭಿವ್ಯಕ್ತಿ ಸ್ವಾತಂತ್ರ್ಯ ವಿರೋಧಿ ಗುಂಪೊಂದು ಸಭಾಂಗಣದ ಎದುರು ಪ್ರತಿಭಟನೆಗೆ ಮುಂದಾಗಿತ್ತು ಎಂದು ತಿಳಿಸಿದ್ದಾರೆ.
‘ಪ್ರಕಾಶ್ ರಾಜ್ ಗೋ ಬ್ಯಾಕ್’ ಮುಂತಾದ ಘೋಷಣೆಗಳು ಕೇಳಿ ಬಂದಾಗ, ಸಮುದಾಯ ಸಂಘಟನೆಯು ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿ, ಕಾರ್ಯಕ್ರಮಕ್ಕೆ ಅಡ್ಡಿ ಪಡಿಸದಂತೆ ಕ್ರಮ ಕೈಗೊಳ್ಳಿ ಎಂದು ವಿನಂತಿಸಿಕೊಂಡ ನಂತರದಲ್ಲಿ ಕಾರ್ಯಕ್ರಮವು ಮುಂದುವರಿಯಿತು. ಕಾರ್ಯಕ್ರಮ ಪ್ರಾರಂಭವಾಗುತ್ತಿದ್ದಂತೆ, ದಾಂಧಲೆ ಎಬ್ಬಿಸುವ ಉದ್ದೇಶದಿಂದ, ದಾಳಿ ಕೋರ ಗುಂಪಂದು ಸಭಾಂಗಣದ ಒಳ ನುಗ್ಗಿರುವುದು ಖಂಡನೀಯ ಎಂದು ತಿಳಿಸಿದ್ದಾರೆ.
ಸಮುದಾಯವು ಈ ನಾಡಿನ ಸಾಂಸ್ಕೃ ತಿಕ ಮತ್ತು ಸಾಹಿತ್ಯಕ ಪ್ರಜ್ಞೆಯಾಗಿದ್ದು, ಶರಣರ ನಾಡಿನಲ್ಲಿ ಇಂತಹ ಜನ ಚಳವಳಿಗೆ ಅಭಿವ್ಯಕ್ತಿಯ ವಿರುದ್ಧ ನಡೆಸಿದ ದಾಳಿ ಖಂಡನೀಯ. ಜೊತೆಗೆ ಪೊಲೀಸ್ ವ್ಯವಸ್ಥೆಯೂ ಕೂಡ ತನ್ನ ಅಸಮರ್ಥತೆಯನ್ನು ಪ್ರದರ್ಶಿಸಿ, ಈ ದಾಳಿಗೆ ಪೂರಕವಾಗುವಂತೆ ವರ್ತಿಸಿದೆ ಎಂದು ಹೇಳಿದ್ದಾರೆ.
ಬಲಪಂಥೀಯ ಸಂಘಟನೆಗಳ ದುರ್ವರ್ತನೆಗೆ ಕಡಿವಾಣ ಹಾಕಿ: ಜಾಗೃತ ನಾಗರಿಕರು ಕರ್ನಾಟಕ
ಸರ್ವ ಜನಾಂಗದ ಶಾಂತಿಯ ತೋಟವೆಂಬ ಹೆಗ್ಗಳಿಕೆಯ ಕರ್ನಾಟಕವನ್ನು ದ್ವೇಷ ರಾಜಕಾರಣದ ನೆಲವನ್ನಾಗಿಸಲು ಪ್ರಯತ್ನಿಸುತ್ತಿರುವ ಬಲಪಂಥೀಯ ಸಂಘಟನೆಗಳ ದುರ್ವರ್ತನೆಗೆ ರಾಜ್ಯ ಸರಕಾರ ತುರ್ತಾಗಿ ಮತ್ತು ಕಠಿಣ ಕ್ರಮಗಳ ಮೂಲಕ ಕಡಿವಾಣ ಹಾಕಬೇಕು. ಧಾರವಾಡದಂತಹ ಸಾಂಸ್ಕೃತಿಕ ನಗರಿಯನ್ನು ಮತಧರ್ಮ ಧೃವೀಕರಣದ ಮೂಲಕ ಕೋಮುವಾದಿಗಳ ಆಡಂಬೋಲ ಮಾಡುತ್ತಿರುವ ಸ್ಥಳೀಯ ಜನಪ್ರತಿನಿಧಿಗಳ ವರ್ತನೆಯನ್ನು ಯಾವ ಕಾರಣಕ್ಕೂ ಈ ನೆಲ ಸಹಿಸುವುದಿಲ್ಲ ಎಂಬ ಎಚ್ಚರಿಕೆಯನ್ನು ರಾಜ್ಯ ಸರಕಾರ ನೀಡಬೇಕು ಎಂದು ಜಾಗೃತ ನಾಗರಿಕರು ಕರ್ನಾಟಕ ಒತ್ತಾಯಿಸಿದೆ.