ಸಾಂದರ್ಭಿಕ ಚಿತ್ರ | PC : Image by rawpixel.com on Magnific

ಬೆಂಗಳೂರು : ವಾಟ್ಸ್ ಆ್ಯಪ್‌ ನಲ್ಲಿ ಸಂದೇಶ ಕಳುಹಿಸಿ 1.40 ಕೋಟಿ ರೂ. ಹಣ ವರ್ಗಾಯಿಸಿಕೊಂಡು ನಗರದ ಜೈನ್ ವಿಶ್ವವಿದ್ಯಾಲಯಕ್ಕೆ ವಂಚಿಸಿದ್ದ ನಾಲ್ವರು ಆರೋಪಿಗಳನ್ನು ರಾಜ್ಯ ಸೈಬರ್ ಕಮಾಂಡ್ ಘಟಕದ ಅಧಿಕಾರಿಗಳು ಬಂಧಿಸಿದ್ದು, ಆರೋಪಿಗಳಿಂದ 8.50 ಲಕ್ಷ ರೂ. ನಗದು ಹಾಗೂ ನಾಲ್ಕು ಮೊಬೈಲ್ ವಶಕ್ಕೆ ಪಡೆದುಕೊಳ್ಳಲಾಗಿದೆ.

ಅಣ್ಣಯ್ಯ, ಬುಸ್ಪಳ್ಳಿ ರವಿಕುಮಾರ್ ರೆಡ್ಡಿ, ಅಂಬರಾಯ ಮತ್ತು ಸೈಯದ್ ವಹಿಹುದ್ದೀನ್ ಖಾದ್ರಿ ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ. ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಡೇವಿಡ್ ಎಂಬಾತನ ಬಂಧನಕ್ಕಾಗಿ ಶೋಧ ನಡೆಸಲಾಗುತ್ತಿದೆ.

ವಂಚನೆ ಎಸಗಲು ಪೂರ್ವ ಸಿದ್ಧತೆ ಮಾಡಿಕೊಂಡಿದ್ದ ಆರೋಪಿಗಳು ವಿಶ್ವವಿದ್ಯಾಲಯದ ಅಕೌಂಟೆಂಟ್ ವಿನಯ್ ಭೂಷಣ್ ಅವರ ವಾಟ್ಸ್ ಆ್ಯಪ್‌ ಸಂಖ್ಯೆಗೆ ಜಿಪ್ ಫೈಲ್ ಅನ್ನು ಕಳುಹಿಸಿದ್ದಾರೆ. ವಿನಯ್ ಅದನ್ನು ಡೌನ್‍ಲೋಡ್ ಮಾಡಿಕೊಂಡಿದ್ದರು. ಈ ಮೂಲಕ ಆರೋಪಿಗಳು ಗೂಗಲ್ ಕ್ರೋಮ್ ಮೂಲಕ ಪ್ರವೇಶಿಸಿ ವಾಟ್ಸ್ ಆ್ಯಪ್‌ ಗೆ ಲಾಗಿನ್ ಆಗಿದ್ದಾರೆ. ಸಿಬ್ಬಂದಿ ಗಮನಕ್ಕೆ ಬಾರದೆ ದತ್ತಾಂಶ ಕದ್ದು ಸುಮಾರು 15-20 ದಿನಗಳ ವಿವಿಧ ಹಣಕಾಸಿನ ವಹಿವಾಟುಗಳ ಮೇಲೆ ನಿಗಾ ಇಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ವಿಶ್ವವಿದ್ಯಾಲಯದ ಅಧ್ಯಕ್ಷರ ಭಾವಚಿತ್ರ ಹಾಗೂ ಮೊಬೈಲ್ ನಂಬರ್ ಬಳಸಿ ನಕಲಿ ವಾಟ್ಸ್ ಆ್ಯಪ್‌ ಪ್ರೊಫೈಲ್ ಅನ್ನು ವಂಚಕರು ಸೃಷ್ಟಿಸಿಕೊಂಡಿದ್ದಾರೆ. ಹಾಗೆಯೇ ಅವರ ಹೆಸರಿನಲ್ಲಿ ವಾಟ್ಸ್ ಆ್ಯಪ್‌ ಸಂದೇಶ ಕಳುಹಿಸಿ ವಿದೇಶಿ ಐಪಿ ವಿಳಾಸದ ಮೂಲಕ 1.40 ಕೋಟಿ ರೂ. ಹಣವನ್ನು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಬಳಿಕ ವಂಚನೆ ಬೆಳಕಿಗೆ ಬರುತ್ತಿದ್ದಂತೆ ವಿಶ್ವವಿದ್ಯಾಲಯದ ಜಂಟಿ ನಿಬಂಧಕ ಸಂತೋಷ್‌ ಎಂಬುವರು ದಕ್ಷಿಣ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತಾಂತ್ರಿಕ ಸುಳಿವು ಆಧರಿಸಿ ನಾಲ್ವರನ್ನು ಬಂಧಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor