ಸ್ಟಿಂಗ್ ಮಾಡುವ ಗುರುವಿಗೆ ತಿರುಮಂತ್ರ ಹೇಳಲು ಸಾಧ್ಯವೇ?, ಹಾಗೇನಾದರೂ ಆಗಿದ್ದರೆ ತನಿಖೆ ಮಾಡಿಸಲಿ : ಎಚ್.ಡಿ.ಕುಮಾರಸ್ವಾಮಿ
ಹೊಸದಿಲ್ಲಿ : ಸ್ಟಿಂಗ್ ಆಪರೇಶನ್ ಮಾಡುವುದರಲ್ಲಿ ಮಾಸ್ಟರ್ ಆಗಿರುವ ವ್ಯಕ್ತಿಯೇ ತನ್ನ ವಿರುದ್ಧ ಸ್ಟಿಂಗ್ ನಡೆಯುತ್ತಿದೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ. ಸ್ಟಿಂಗ್ ಮಾಡುವ ಗುರುವಿಗೆ ತಿರುಮಂತ್ರ ಹೇಳಲು ಸಾಧ್ಯವೇ? ಹಾಗೇನಾದರೂ ಆಗಿದ್ದರೆ ತನಿಖೆ ಮಾಡಿಸಲಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದರು.
ಗುರುವಾರ ಹೊಸದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಟ್ರ್ಯಾಪ್ ಮಾಡಲಿಕ್ಕೆ ಬಂದಿದ್ದರು, ಆ ವಿಷಯ ಪೊಲಿಸರಿಗೂ ಗೊತ್ತು. ಹಲವಾರು ಫೋಟೋಗಳು ಇವೆ ಎಂದು ಬೇರೆ ಹೇಳಿದ್ದಾರೆ. ಸ್ಟಿಂಗ್ ಮಾಡಿದ ಆ ಪಿತಾಮಹ ಯಾರು ಅಂತಲೂ ಗೊತ್ತು ಎಂದಿದ್ದಾರೆ. ಅವರೆಲ್ಲಾ ಯಾರೂ ಎಂಬುದನ್ನು ಜನಗಳ ಮುಂದೆ ಇಡಿ. ನಿಮ್ಮ ಬಳಿ 35 ಲಕ್ಷ ರೂ.ಬಹುಮಾನ ಪಡೆದುಕೊಂಡ ಎಸ್‍ಐಟಿ ಇದೆಯಲ್ಲವೇ? ಇಂದು ಟಾಂಗ್ ಕೊಟ್ಟರು.
ಈ ಮುಖ್ಯಮಂತ್ರಿ ನೀಡುತ್ತಿರುವ ಹೇಳಿಕೆಗಳೆ ಅವರ ವ್ಯಕ್ತಿತ್ವವನ್ನು ತೋರಿಸುತ್ತವೆ. ಜನರ ಗಮನವನ್ನು ಬೇರೆಡೆ ತಿರುಗಿಸಲು ಇಂತಹ ಸ್ಟಂಟ್ ಮಾಡುತ್ತಿದ್ದಾರೆ. ನೈಸ್ ಕಂಪನಿಗೆ ಸಂಬಂಧಿಸಿದ ಅಕ್ರಮಗಳ ದಾಖಲೆಗಳನ್ನು ಬಿಡುಗಡೆ ಮಾಡಿದಾಗ ಉಂಟಾದ ಮುಜುಗರವನ್ನು ಮರೆಮಾಚಲು ಇಂತಹ ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಕಟವಾಗದಂತೆ ತಡೆಯಲು ಇಂತಹ ಕೆಲಸ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ವಿರುದ್ಧ ಕುಮಾರಸ್ವಾಮಿ ಆರೋಪ ಮಾಡಿದರು.
ರಾಜ್ಯದ ಮುಖ್ಯಮಂತ್ರಿ ಆಗಿ, ಹಿಂದಿನ ಸಿಎಂ ಸಿದ್ದರಾಮಯ್ಯ ಅವರನ್ನು ಟ್ರ್ಯಾಪ್ ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಸ್ಟಿಂಗ್ ಮಾಡಲು ಬಂದವರನ್ನು ಹಿಡಿಯದೇ ಕಡಲೆಪುರಿ ತಿನ್ನುತ್ತಿದ್ದೀರಾ? ಎಲ್ಲಾ ವಿಷಯ ಗೊತ್ತಿದ್ದರೂ ಅವರನ್ನು ಯಾಕೆ ಹಿಡಿಯಲಿಲ್ಲ? ಈ ನೈಸ್ ಸಂಸ್ಥೆ ಮಾಲಕ ನಿಮ್ಮನ್ನು ಭೇಟಿ ಮಾಡಿ ಹೋದರು. ಅವರೇ ಏನಾದರೂ ನಿಮ್ಮನ್ನು ಟ್ರ್ಯಾಪ್ ಮಾಡಲಿಕ್ಕೆ ಪ್ರಯತ್ನ ಮಾಡುತ್ತಿದ್ದಾರೋ ಎಂಬ ಸತ್ಯವನ್ನು ನೀವೇ ಹೇಳಬೇಕು ಎಂದು ಅವರು ಹೇಳಿದರು.
ಈ ಹಿಂದೆ ರಮೇಶ್ ಜಾರಕಿಹೊಳಿ ಅವರನ್ನು ಟ್ರ್ಯಾಪ್ ಮಾಡುವ ಕೆಲಸ ಮಾಡಿದ್ದು ಯಾರು? ಮಾಜಿ ಮಂತ್ರಿ ಕೆ.ಎನ್.ರಾಜಣ್ಣ ವಿಧಾನಸಭೆಯಲ್ಲೇ 40-48 ಜನರ ಟ್ರ್ಯಾಪ್ ಬಗ್ಗೆ ಮಾತನಾಡಿದ್ದರು. ನಮ್ಮ ಮಂತ್ರಿಮಂಡಲದ ಮಂತ್ರಿಯೇ ಮೂಲಪುರುಷನೇ ಇದ್ದಾನೆ ಎಂದು ರಾಜಣ್ಣ ಹೇಳಿದ್ದರು. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಯಾವ ರೀತಿ ಮುಗಿಸಿದಿರಿ ಎನ್ನುವುದನ್ನು ನಾನು ಬಲ್ಲೆ. ಸತ್ಯ ಹೇಳಿ, ಇದೆಲ್ಲಾ ನಿಮ್ಮದೇ ಕೈವಾಡ ಅಲ್ಲವೇ? ಎಂದು ಡಿಕೆಶಿಯನ್ನು ಕುಮಾರಸ್ವಾಮಿ ಪ್ರಶ್ನಿಸಿದರು.
ಸ್ಟಿಂಗ್ ಯಾರು ಮಾಡಲು ಬಂದರು ಎಂಬುದನ್ನು ಮುಖ್ಯಮಂತ್ರಿ ಹೇಳಲೇಬೇಕಾಗುತ್ತದೆ. ಅವರು ಹೇಳಿಕೆ ಕೊಟ್ಟು ಸುಮ್ಮನೆ ಇರೋಕೆ ಆಗೋದಿಲ್ಲ. ಮುಖ್ಯಮಂತ್ರಿ ವಿರುದ್ಧವೇ ಟ್ರ್ಯಾಪ್ ನಡೆಯುತ್ತಿದೆ ಎಂದರೆ ಸಾಮಾನ್ಯ ವಿಷಯವಲ್ಲ. ಇದೆಲ್ಲಾ ತನಿಖೆಗೆ ಒಳಪಡಬೇಕು. ರಾಜ್ಯಪಾಲರನ್ನು ಭೇಟಿಗೆ ತೆರಳಿದ್ದವರಲ್ಲಿ ಒಬ್ಬರು ಇದ್ದಾರೆ ಎಂದು ಹೇಳಿದ್ದೀರಾ? ಯಾರು ಅವರು? ಎಂಬುದನ್ನು ಅವರು ಹೇಳಬೇಕಾಗುತ್ತದೆ ಎಂದು ಅವರು ಒತ್ತಾಯಿಸಿದರು.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ನೈತಿಕತೆಯ ಬಗ್ಗೆ ಮಾತನಾಡುತ್ತಾರೆ. ಅವರಿಗೆ ಅಂತಹ ನೈತಿಕತೆ ಇದ್ದರೆ ಕೆಪಿಎಸ್‍ಸಿಯಲ್ಲಿ ನಡೆದ 24 ಜನ ಸಹಾಯಕ ಎಕ್ಸಿಕ್ಯೂಟಿವ್ ಎಂಜಿನಿಯರ್ ಗಳ ನೇಮಕಾತಿಗೆ ರುಜು ಹಾಕಿದ್ದರ ಬಗ್ಗೆ ಇದುವರೆಗೂ ಯಾಕೆ ಉತ್ತರ ನೀಡಿಲ್ಲ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.