ಬೆಂಗಳೂರು : ಬೆಂಗಳೂರಿನ ಐತಿಹಾಸಿಕ ಲಾಲ್‍ಬಾಗ್ ಸಸ್ಯೋದ್ಯಾನದಲ್ಲಿ ಅತ್ಯಾಧುನಿಕ ಎಐ (ಕೃತಕ ಬುದ್ಧಿಮತ್ತೆ) ಆಧಾರಿತ ಸ್ವಾಗತ ಕಮಾನ್‍ಗಳನ್ನು ಗುರುವಾರ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಲೋಕಾರ್ಪಣೆಗೊಳಿಸಿ, ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಿದರು.

ಬಳಿಕ ಇಲಾಖೆಯ ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಸಚಿವರು, ಲಾಲ್‍ಬಾಗ್‍ಗೆ ಇದೀಗ ಅತ್ಯಾಧುನಿಕ ತಂತ್ರಜ್ಞಾನದ ಸ್ಪರ್ಶ ಸಿಕ್ಕಿದೆ. ಈ ನೂತನ ತಾಂತ್ರಿಕ ವ್ಯವಸ್ಥೆಯು ತೋಟಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಮತ್ತು ತೋಟಗಾರಿಕಾ ಬೆಳೆಗಾರರಿಗೆ ಅಂತರ್‍ರಾಷ್ಟ್ರೀಯ ಮಟ್ಟದ ಡಿಜಿಟಲ್ ಅನುಭವವನ್ನು ನೀಡಲಿದ್ದು, ಇದು ತೋಟಗಾರಿಕೆ ಇಲಾಖೆಯ ಐತಿಹಾಸಿಕ ಹೆಜ್ಜೆಯಾಗಿದೆ ಎಂದರು.

ಇಂದಿನ ಆಧುನಿಕ ಯುಗದಲ್ಲಿ ತೋಟಗಾರಿಕಾ ಬೆಳೆಗಾರರು ಸಾಂಪ್ರದಾಯಿಕ ಪದ್ಧತಿಯೊಂದಿಗೆ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಸರಕಾರವು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಇಂತಹ ಹೈಟೆಕ್ ಸೌಲಭ್ಯಗಳನ್ನು ಸೃಷ್ಟಿಸುತ್ತಿದ್ದು, ಇದರ ಸಂಪೂರ್ಣ ಲಾಭವನ್ನು ರಾಜ್ಯದ ಪ್ರತಿಯೊಬ್ಬ ತೋಟಗಾರಿಕಾ ಬೆಳೆಗಾರರು ಪಡೆದುಕೊಳ್ಳಬೇಕು ಎಂದು ಎಸ್.ಎಸ್.ಮಲ್ಲಿಕಾರ್ಜುನ್ ಕರೆ ನೀಡಿದರು.

ಅಧಿಕಾರಿಗಳು ಕೇವಲ ಕಚೇರಿಗೆ ಸೀಮಿತವಾಗದೆ, ಸರಕಾರದ ಸೌಲಭ್ಯಗಳನ್ನು ತಳಮಟ್ಟದ ಜನರಿಗೂ ತಲುಪಿಸಬೇಕು. ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ತೋಟಗಾರಿಕಾ ಬೆಳೆಗಾರರಿಗೆ ಅನುಕೂಲವಾಗುವಂತೆ ಟ್ರಾಕ್ಟರ್ ವಿತರಣೆ, ಕೃಷಿ ಹೊಂಡಗಳ ನಿರ್ಮಾಣ ಹಾಗೂ ತರಕಾರಿ-ಹಣ್ಣುಗಳ ಸಂರಕ್ಷಣೆಗಾಗಿ ಶೀತಲೀಕರಣ ಘಟಕಗಳನ್ನು ಸ್ಥಾಪಿಸಲು ಅಗತ್ಯವಿರುವ ಎಲ್ಲಾ ನೆರವು ಮತ್ತು ಸಹಾಯಧನವನ್ನು ತಕ್ಷಣವೇ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಎಸ್.ಎಸ್.ಮಲ್ಲಿಕಾರ್ಜುನ್ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಪರಂಪರಾಗತ ಕೃಷಿ ವಿಕಾಸ ಯೋಜನೆಯಡಿ ತಾಳೆ ಎಣ್ಣೆ ಬೆಳೆಗೆ ಹೆಚ್ಚಿನ ಪ್ರೊ ತ್ಸಾಹ ನೀಡಬೇಕು ಹಾಗೂ ಒಟ್ಟಾರೆ ತೋಟಗಾರಿಕಾ ಬೆಳೆಗಳಿಗೆ ಅತ್ಯಧಿಕ ಸಹಾಯಧನವನ್ನು ಬೆಳೆಗಾರರಿಗೆ ಮಂಜೂರು ಮಾಡಬೇಕು. ಜೊತೆಗೆ, ತೋಟಗಾರಿಕಾ ಬೆಳೆಗಾರರ ದೀರ್ಘಕಾಲೀನ ಆರ್ಥಿಕ ಭದ್ರತೆಗಾಗಿ, ದೀರ್ಘಕಾಲ ಬಾಳುವ ಹಾಗೂ ಅತ್ಯಧಿಕ ಫಸಲು ನೀಡುವ ನೂತನ ತೋಟಗಾರಿಕಾ ತಳಿಗಳನ್ನು ಸಂಶೋಧಿಸುವಂತೆ ತೋಟಗಾರಿಕಾ ವಿಶ್ವವಿದ್ಯಾಲಯದ ವಿಜ್ಞಾನಿಗಳಿಗೆ ಮತ್ತು ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು.

ವಿಶೇಷವಾಗಿ ತೆಂಗು ಬೆಳೆಗಾರರನ್ನು ಕಾಡುತ್ತಿರುವ ನುಸಿ ರೋಗಕ್ಕೆ ಶಾಶ್ವತ ಪರಿಹಾರ ಮತ್ತು ಸೂಕ್ತ ಔಷಧಿಯನ್ನು ಶೀಘ್ರವಾಗಿ ಕಂಡುಹಿಡಿಯುವಂತೆ ಸೂಚಿಸಿದ ಸಚಿವರು, ನೀರಿನ ಸದ್ಬಳಕೆಗಾಗಿ ಹನಿ ನೀರಾವರಿ ಪದ್ಧತಿಗೆ ಹೆಚ್ಚುವರಿ ಸಹಾಯಧನವನ್ನು ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಎಸ್.ಎಸ್.ಮಲ್ಲಿಕಾರ್ಜುನ್ ಸೂಚಿಸಿದರು.

ರೈತ ಉತ್ಪಾದಕ ಸಂಸ್ಥೆಗಳ ಮುಖಾಂತರ ರಾಜ್ಯದ ಎಲ್ಲಾ ತೋಟಗಾರಿಕಾ ಬೆಳೆಗಾರರಿಗೂ ಆಧುನಿಕ ತೋಟಗಾರಿಕಾ ಪದ್ಧತಿಗಳ ಕುರಿತು ಅಗತ್ಯ ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವಂತೆ ಇಲಾಖೆಯ ಅಧಿಕಾರಿಗಳಿಗೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ನಿರ್ದೇಶಿಸಿದರು. ಇದೇ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹಾಗೂ ತೋಟಗಾರಿಕಾ ಬೆಳೆಗಾರರು ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor