ಸಾಂದರ್ಭಿಕ ಚಿತ್ರ | PC : Image by macrovector on Magnific

ಬೆಂಗಳೂರು : ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯೊರ್ವನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ) ಅಧಿಕಾರಿಗಳು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ಆರೋಪಿಯನ್ನು ಪುದುಮಡಂ ಇಮ್ರಾನ್ ಎಂದು ಗುರುತಿಸಲಾಗಿದ್ದು, ಎನ್‍ಐಎ ಕೋರಿಕೆಯ ಮೇರೆಗೆ ಇಂಟರ್‍ ಪೋಲ್ ಹೊರಡಿಸಿದ್ದ ‘ರೆಡ್ ನೋಟಿಸ್' ಆಧಾರದ ಮೇಲೆ ಶ್ರೀಲಂಕಾದ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು ಭಾರತಕ್ಕೆ ಮರಳಿಸಿದ್ದಾರೆ. ನಂತರ ಎನ್‍ಐಎ ಆತನನ್ನು ಬಂಧಿಸಿದೆ.

ಆರೋಪಿಯು ಸಂತ್ರಸ್ತರನ್ನು ಶ್ರೀಲಂಕಾದಿಂದ ಕೆನಡಾಕ್ಕೆ ಕಾನೂನುಬದ್ಧ ದಾಖಲೆಗಳೊಂದಿಗೆ ಕರೆದೊಯ್ಯುವುದಾಗಿ ಸುಳ್ಳು ಭರವಸೆ ನೀಡಿ, ಅವರನ್ನು ಕಳ್ಳಸಾಗಣೆ ಮಾಡುವ ಕೆಲಸದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದನು. ಇದಕ್ಕಾಗಿ ಅವನು ಸಂತ್ರಸ್ತರ ಕುಟುಂಬ ಸದಸ್ಯರು ಅಥವಾ ಸಂಬಂಧಿಕರಿಂದ ಹಣವನ್ನು ಸಂಗ್ರಹಿಸಿದ್ದನು. ಸಂತ್ರಸ್ತರ ಕಳ್ಳಸಾಗಣೆ ಮತ್ತು ಅವರನ್ನು ಒತ್ತೆಯಿಟ್ಟುಕೊಳ್ಳುವ ಉದ್ದೇಶಕ್ಕಾಗಿ, ಅವನು ‘ಹವಾಲಾ' ಮಾರ್ಗಗಳ ಮೂಲಕ ಭಾರತದಲ್ಲಿರುವ ತನ್ನ ಸಹ-ಆರೋಪಿಗಳಿಗೆ ಹಣವನ್ನು ಕಳುಹಿಸಿದ್ದನು ಎಂದು ಎನ್‍ಐಎ ಅಧಿಕಾರಿಗಳು ಹೇಳಿದ್ದಾರೆ.

ಈ ಪ್ರಕರಣವು ಮಂಗಳೂರಿನಲ್ಲಿ ಸ್ಥಳೀಯ ಪೊಲೀಸರು ನಡೆಸಿದ ದಾಳಿಗೆ ಸಂಬಂಧಿಸಿದ್ದು, ಮಾಹಿತಿಯ ಆಧಾರದ ಮೇಲೆ ನಡೆಸಲಾದ ಈ ದಾಳಿಯಲ್ಲಿ, ಯಾವುದೇ ಮಾನ್ಯ ದಾಖಲೆಗಳಿಲ್ಲದ ಶ್ರೀಲಂಕಾದ ಪ್ರಜೆಗಳು ಪತ್ತೆಯಾಗಿದ್ದರು. ಈ ಸಂಬಂಧ ವಿದೇಶಿಯರ ಕಾಯ್ದೆ ಮತ್ತು ಪಾಸ್‍ಪೋರ್ಟ್ ಕಾಯ್ದೆಯ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ನಂತರ ಎನ್‍ಐಎ ಈ ಪ್ರಕರಣವನ್ನು ಕೈಗೆತ್ತಿಕೊಂಡಿದೆ. ಪ್ರಕರಣದಲ್ಲಿ, ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳಾದ ಸೀನಿ ಅಬುಲ್ ಖಾನ್ ಮತ್ತು ಇಮ್ರಾನ್ ಖಾನ್ ಅವರನ್ನು ಕ್ರಮವಾಗಿ 2024 ಮತ್ತು 2025ರಲ್ಲಿ ಬಂಧಿಸಲಾಗಿದ್ದು, ಅವರು ಪ್ರಸ್ತುತ ಬೆಂಗಳೂರಿನ ಎನ್‍ಐಎ ಪ್ರಕರಣಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. ಈಗ ಪುದುಮಡಂ ಇಮ್ರಾನ್ ಎಂಬ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ಎನ್‍ಐಎ ಅಧಿಕಾರಿಗಳು ಹೇಳಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor