Bengaluru | ವಿದೇಶದಿಂದ ಪಾರ್ಸಲ್‍ನಲ್ಲಿ ಬಂದ 2.32 ಕೋಟಿ ಮೌಲ್ಯದ ನಿಷೇಧಿತ ಮಾದಕ ವಸ್ತು ಜಪ್ತಿ
ಸಾಂದರ್ಭಿಕ ಚಿತ್ರ | PC : Gemini AI
ಬೆಂಗಳೂರು : ರಾಜಧಾನಿ ಬೆಂಗಳೂರು ನಗರದಲ್ಲಿರುವ ಅಂತರ್ ರಾಷ್ಟ್ರೀಯ ಅಂಚೆ ಕಚೇರಿಗೆ ವಿದೇಶದಿಂದ ಅನುಮಾನಾಸ್ಪದ ಪಾರ್ಸಲ್ ಬಂದಿರುವ ಬಗ್ಗೆ ಮಾಹಿತಿ ಪಡೆದು ಸಿಸಿಬಿ ಪೊಲೀಸರು ದಾಳಿ ನಡೆಸಿ ಸುಮಾರು 2.32 ಕೋಟಿ ರೂ. ಮೌಲ್ಯದ 3 ಕೆ.ಜಿ. 312 ಗ್ರಾಂ ಹೈಡ್ರೋಗಾಂಜಾ ವಶಪಡಿಸಿಕೊಂಡಿರುವುದಾಗಿ ವರದಿಯಾಗಿದೆ.
ಕೆಂಪೇಗೌಡ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಅಂತರ್ ರಾಷ್ಟ್ರೀಯ ಅಂಚೆ ಕಚೇರಿಗೆ ನಿಷೇಧಿತ ಮಾದಕ ವಸ್ತುಗಳಿರುವ ಮೂರು ಬಾಕ್ಸ್ ಗಳು ಬಂದಿರುವುದಾಗಿ ಕಸ್ಟಮ್ಸ್ ಅಧಿಕಾರಿಗಳು ಸಿಸಿಬಿಗೆ ಮಾಹಿತಿಯನ್ನು ನೀಡಿರುತ್ತಾರೆ. ಈ ಮಾಹಿತಿಯನ್ನಾಧರಿಸಿ ಸಿಸಿಬಿಯ ಮಾದಕ ವಸ್ತು ನಿಗ್ರಹದಳ ಪೊಲೀಸರು, ವಿದೇಶದಿಂದ ಬಂದಿದ್ದ 3 ಕೆ.ಜಿ. 312 ಗ್ರಾಂನ ನಿಷೇಧಿತ ಮಾದಕ ವಸ್ತುಗಳಿರುವ ಮೂರು ಬಾಕ್ಸ್ ಗಳನ್ನು ವಶಪಡಿಸಿಕೊಂಡಿದ್ದು, ಇದರ ಮಾರುಕಟ್ಟೆ ಮೌಲ್ಯ 2.32 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ.
ಈ ಸಂಬಂಧ ಕೆಂಪೇಗೌಡನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿದೇಶದಿಂದ ಮಾದಕ ವಸ್ತುಗಳ ಪಾರ್ಸೆಲ್‍ಗಳನ್ನು ತರಿಸಿಕೊಂಡಿದ್ದ ಮೂವರು ವ್ಯಕ್ತಿಗಳ ಪತ್ತೆಗಾಗಿ ಹುಡುಕಾಟ ಮುಂದುವರೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.