×
Ad

ಬೆಂಗಳೂರು : ಟೈಕೋ ಎಲೆಕ್ಟ್ರಾನಿಕ್ಸ್ ಕಾರ್ಮಿಕರಿಗೆ ಕೆಲಸ ಕೊಡಲು ಆಗ್ರಹ

Update: 2025-11-29 08:56 IST

ಬೆಂಗಳೂರು, ನ.28: ಸ್ವಿಜರ್‌ಲ್ಯಾಂಡ್ ಮೂಲದ ಬಹು ರಾಷ್ಟ್ರೀಯ ಕಂಪೆನಿಗಳಲ್ಲಿ ಒಂದಾಗಿರುವ ಟಿ.ಇ ಕನೆಕ್ಟಿವಿಟಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಲ್ಲಿ ಕೆಲಸ ಮಾಡುತ್ತಿದ್ದ 200ಕ್ಕೂ ಹೆಚ್ಚಿನ ಖಾಯಂ ಕಾರ್ಮಿಕರಿಗೆ ಕೂಡಲೇ ಕೆಲಸ ಕೊಡಬೇಕು ಎಂದು ಟೈಕೋ ಎಲೆಕ್ಟ್ರಾನಿಕ್ಸ್ ಎಂಪ್ಲಾಯೀಸ್ ಯೂನಿಯನ್‍ನ ಕಾನೂನು ಸಲಹೆಗಾರ ಕೆ.ಎ.ಗಂಗಣ್ಣ ಆಗ್ರಹಿಸಿದ್ದಾರೆ.

ಶುಕ್ರವಾರ ನಗರದ ಪ್ರೆಸ್ ಕ್ಲಬ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದರಿ ಕಂಪೆನಿಯಲ್ಲಿ 2011 ರಲ್ಲಿ 607 ಜನ ಖಾಯಂ ಕಾರ್ಮಿಕರಿದ್ದು, 1500ಕ್ಕೂ ಹೆಚ್ಚು ಗುತ್ತಿಗೆ ಕಾರ್ಮಿಕರು, ಅಷ್ಟೇ ಪ್ರಮಾಣದಲ್ಲಿ ಮೇಲ್ವಿಚಾರಕರು, ಇಂಜಿನಿಯರ್ ಹಾಗೂ ಮೇಲ್ಪಟ್ಟ ಅಧಿಕಾರಿಗಳು ಕೆಲಸ ಮಾಡುತ್ತಿದ್ದರು. ಇದರೊಂದಿಗೆ ನೂರಾರು ಕೋಟಿ ರೂ.ಗಳ ವಹಿವಾಟನ್ನು ನಡೆಸುತ್ತಿದ್ದರು ಎಂದರು.

ಕಂಪೆನಿಯು ವೇಗವಾಗಿ ಬೆಳೆಯುತ್ತಿದ್ದ ಸಂದರ್ಭದಲ್ಲಿ ಆಡಳಿತ ಮಂಡಳಿ ಸ್ವಯಂ ನಿವೃತ್ತಿ ಯೋಜನೆಯ ಹೆಸರಿನಲ್ಲಿ ಕಾರ್ಮಿಕರನ್ನು ಮನೆಗೆ ಕಳುಹಿಸಲು ಒತ್ತಾಯಿಸಲು ಆರಂಭಿಸಿತು. ಇದಕ್ಕೆ ಒಪ್ಪದೇ ಇದ್ದಾಗ 2017 ರಲ್ಲಿ 607 ಜನ ಇದ್ದ ಕಾರ್ಮಿಕರನ್ನು 262ಕ್ಕೆ ಇಳಿಸಿತು ಮತ್ತು ಕಾರ್ಮಿಕರನ್ನು ಕಂಪೆನಿಯ ಒಳಗೆ ನಿರಾಕರಿಸಿತು. ಆದರೆ ಕಾರ್ಮಿಕರಿಗೆ ಸಂಬಳ ಕೊಡುತ್ತಾ ಬಂತು. 2024ರಲ್ಲಿ ಏಕಾಏಕಿ ಧಾರವಾಡಕ್ಕೆ ಸ್ಥಳಾಂತರಿಸಿ, ಕೆಲಸ ಬೇಕೆಂದರೆ ಅಲ್ಲಿಗೆ ಬರಬೇಕೆಂದು ಸೂಚಿಸಿತು ಎಂದು ಅವರು ಮಾಹಿತಿ ನೀಡಿದರು.

ವಾಸ್ತವದಲ್ಲಿ ಕಾರ್ಮಿಕರನ್ನು ಮನೆಗೆ ಕಳುಹಿಸುವ ದುರುದ್ದೇಶದಿಂದ ಆಡಳಿತ ಮಂಡಳಿ ಧಾರವಾಡದಲ್ಲಿ ಕೆಲಸ ಕೊಡುತ್ತೇವೆ ಎಂದು ನಂಬಿಸಿ ವಂಚಿಸಿದೆ. ಕಾರ್ಮಿಕರು ಬೆಂಗಳೂರಿನಲ್ಲಿಯೇ ಕೆಲಸ ಬೇಕೆಂದು ಒತ್ತಾಯಿಸಿ ಆಡಳಿತ ಮಂಡಳಿಗೆ ಪತ್ರ ವ್ಯವಹಾರ ಮಾಡಿದರು. ಇದಿರಂದ ಆಡಳಿತ ಮಂಡಳಿ ಮತ್ತೊಮ್ಮೆ ಕಾರ್ಮಿಕರನ್ನು ಮನೆಯಲ್ಲಿಯೇ ಕೂರಿಸಿತು. 2025ರ ಮೇ ತಿಂಗಳಿನಿಂದ 200ಕ್ಕೂ ಹೆಚ್ಚಿನ ಕಾರ್ಮಿಕರಿಗೆ ವೇತನ ನೀಡಿಲ್ಲ. ಇದರಿಂದ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಟಿ.ಇ ಕನೆಕ್ಟಿವಿಟಿ ಕಂಪೆನಿಯವರು ಎಲ್ಲ ಕಾರ್ಮಿಕರಿಗೂ ಬಾಕಿ ವೇತನದ ಜೊತೆಗೆ ಕೆಲಸ ಕೊಡಬೇಕು ಎಂದು ಗಂಗಣ್ಣ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ನಾಗೇಶ್, ಪ್ರಧಾನ ಕಾರ್ಯದರ್ಶಿ ರಂಗನಾಥ ಬಿ., ಉಪಾಧ್ಯಕ್ಷ ಜಗದೀಶ್ ಎಸ್.ಕೆ., ಖಜಾಂಚಿ ಸಿದ್ದಲಿಂಗ ಸ್ವಾಮಿ ಕೆ., ಕಾರ್ಯದರ್ಶಿ ಮಹೇಶ್ ರಾಥೋಡ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News