×
Ad

Bengaluru | ಡಿಜಿಟಲ್ ಅರೆಸ್ಟ್: 2.1ಕೋಟಿ ರೂ. ಕಳೆದುಕೊಂಡ ತಾಯಿ-ಮಗಳು

Update: 2026-05-07 18:53 IST

ಸಾಂದರ್ಭಿಕ ಚಿತ್ರ | PC : Gemini AI

ಬೆಂಗಳೂರು, ಮೇ 7 : ಡಿಜಿಟಲ್ ಅರೆಸ್ಟ್ ಮೂಲಕ ಗೃಹಿಣಿ ಮತ್ತು ಆಕೆಯ ಮಗಳಿಗೆ ಸುಮಾರು 2.1 ಕೋಟಿ ರೂ. ಹಣವನ್ನು ವಂಚಿಸಿರುವ ಘಟನೆ ಇಲ್ಲಿನ ಜಯನಗರದಲ್ಲಿ ವರದಿಯಾಗಿದೆ.

ಸಂತ್ರಸ್ತರಿಗೆ ಎಪ್ರಿಲ್ 13ರಂದು ವಾಟ್ಸಾಪ್ ಕರೆ ಮಾಡಿದ್ದ ಆರೋಪಿ, ಮಹಿಳೆಯ ಹೆಸರಿನ ಡೆಬಿಟ್ ಕಾರ್ಡ್‌ ಅನ್ನು ನಿಷೇಧಿತ ಸಂಘಟನೆಯ ಸದಸ್ಯನೊಬ್ಬ ಬಳಸುತ್ತಿದ್ದಾನೆ ಎಂದು ಬೆದರಿಸಿದ್ದ. ಅಲ್ಲದೆ, ತನ್ನನ್ನು ಎನ್‍ಐಎ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ ಎನ್ನಲಾಗಿದೆ.

ಪ್ರಕರಣದ ಗಂಭೀರತೆಯನ್ನು ಉಲ್ಲೇಖಿಸಿ ಈ ಬಗ್ಗೆ ಯಾರಿಗೂ ಮಾಹಿತಿ ನೀಡಬಾರದೆಂದು ಎಚ್ಚರಿಕೆ ನೀಡಿದ್ದಲ್ಲದೆ, ಮಹಿಳೆ ಹಾಗೂ ಕುಟುಂಬ ಸದಸ್ಯರ ಗುರುತಿನ ದಾಖಲೆಗಳ ಪ್ರತಿಗಳನ್ನು ಪಡೆದುಕೊಂಡಿದ್ದ. ಬಳಿಕ ಮಹಿಳೆಯ ಪುತ್ರಿಯೂ ಇದೇ ಪ್ರಕರಣದಲ್ಲಿ ಶಂಕಿತಳಾಗಿದ್ದಾಳೆ ಎಂದು ಹೇಳಿದ್ದ. ಆರೋಪಿ ಪೊಲೀಸ್ ಠಾಣೆಯಂತೆ ಕಾಣುವ ಪ್ರದೇಶದಿಂದ ವಿಡಿಯೋ ಕಾಲ್‍ಗಳನ್ನು ಮಾಡಿ ಸಂತ್ರಸ್ತರನ್ನು ಮತ್ತಷ್ಟು ನಂಬಿಸಿದ್ದು, ಆರೋಪಿ ಪ್ರದೀಪ್ ಜೈಸ್ವಾಲ್ ಎಂದು ತನ್ನನ್ನು ಪರಿಚಯಿಸಿಕೊಂಡಿದ್ದ. ಸಂತ್ರಸ್ತ ಮಹಿಳೆ ಮತ್ತು ಪುತ್ರಿಯ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದ ಆತ, ಸಹಕರಿಸದಿದ್ದರೆ ಸಾರ್ವಜನಿಕವಾಗಿ ಬಂಧಿಸಲಾಗುವುದೆಂದು ಬೆದರಿಕೆ ಹಾಕಿದ್ದ ಎಂದು ತಿಳಿದುಬಂದಿದೆ.

ನಂತರ ಹಣದ ವ್ಯವಹಾರಗಳ ಪರಿಶೀಲನೆ ನಡೆಸಬೇಕಿದ್ದು, ಅದೇ ಬಂಧನ ತಪ್ಪಿಸಿಕೊಳ್ಳುವ ಮಾರ್ಗ ಎಂದು ಹೇಳಿ ಬ್ಯಾಂಕ್ ಖಾತೆ ವಿವರಗಳನ್ನು ಆರೋಪಿ ಪಡೆದಿದ್ದ. ಬಳಿಕ, ಆರ್‌ ಬಿಐ ಮಾರ್ಗ ಸೂಚಿಯಂತೆ ಪರಿಶೀಲನೆ ಬಳಿಕ ಹಣ ಹಿಂತಿರುಗಿಸಲಾಗುವುದು ಎಂದು ನಂಬಿಸಿ ವಿವಿಧ ಖಾತೆಗಳಿಗೆ ಹಣ ವರ್ಗಾಯಿಸುವಂತೆ ಸೂಚಿಸಿದ್ದ. ಆರೋಪಿಯ ಮಾತನ್ನು ನಂಬಿದ ಮಹಿಳೆ, ಎಪ್ರಿಲ್ 15ರಿಂದ 23ರವರೆಗೆ ಹಲವು ಆರ್‌ ಟಿಜಿಎಸ್ ವ್ಯವಹಾರಗಳ ಮೂಲಕ ಸುಮಾರು 2.1 ಕೋಟಿ ರೂ. ಹಣವನ್ನು ವಿವಿಧ ಖಾತೆಗಳಿಗೆ ಹಾಕಿರುವುದು ತಿಳಿದು ಬಂದಿದೆ.

ಮೇ 2ರಂದು ಸಂತ್ರಸ್ತ ಮಹಿಳೆ ತನ್ನ ಸಹೋದರನ ಬಳಿ ಮತ್ತಷ್ಟು ಹಣ ಕೇಳಿದಾಗ ಅನುಮಾನಗೊಂಡ ಅವರು, ವಿಚಾರಿಸಿದ್ದಕ್ಕೆ ವಂಚನೆಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ. ಬಳಿಕ ಸಂತ್ರಸ್ತ ಮಹಿಳೆ ಸೈಬರ್ ಸಹಾಯವಾಣಿಗೆ ದೂರು ನೀಡಿದ್ದು, ಈ ಸಂಬಂಧ ಬೆಂಗಳೂರು ಆಗ್ನೇಯ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News