ತುರ್ತು ಸಂದರ್ಭದಲ್ಲಿ ಜನರಿಗೆ ಸೂಕ್ತ ಮಾಹಿತಿ, ಸ್ಪಂದನೆಗೆ ಸಹಾಯಕ : ದಿನೇಶ್ ಗುಂಡೂರಾವ್
ಬೆಂಗಳೂರು, ಮೇ 7: ಆರೋಗ್ಯ ತುರ್ತು ಕಾರ್ಯಾಚರಣೆ ಕೇಂದ್ರವು (ಎಚ್‍ಇಒಸಿ) ತುರ್ತು ಸಂದರ್ಭಗಳಲ್ಲಿ ಜನರಿಗೆ ಸೂಕ್ತ ಮಾಹಿತಿಯನ್ನು ನೀಡಿ, ವೇಗದ ಸ್ಪಂದನೆಯನ್ನು ನೀಡಲು ಸಹಾಯಕವಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಗುರುವಾರ ಇಲ್ಲಿನ ಆರೋಗ್ಯಸೌಧದಲ್ಲಿ ‘ಆರೋಗ್ಯ ತುರ್ತು ಕಾರ್ಯಾಚರಣೆ ಕೇಂದ್ರ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರವು ಸಮಯೋಚಿತ ನಿರ್ಧಾರ, ಸಂಪನ್ಮೂಲಗಳ ಸರಿಯಾದ ಬಳಕೆಗೆ ಮತ್ತು ಜನರಿಗೆ ಮಾಹಿತಿಯನ್ನು ತಲುಪಿಸಿ, ಆತಂಕಕ್ಕೆ ಒಳಗಾಗದಂತೆ ಎಚ್ಚರಿಸಲು ಕೇಂದ್ರೀಯ ನಿಯಂತ್ರಣ ಘಟಕವಾಗಿ ಕಾರ್ಯ ನಿರ್ವಹಿಸಲಿದೆ ಎಂದರು.
ವಿಶ್ವ ಆರೋಗ್ಯ ಸಂಸ್ಥೆಯು ಆರೋಗ್ಯ ತುರ್ತು ಕಾರ್ಯಾಚರಣೆ ಕೇಂದ್ರವನ್ನು ಹೊಂದಿರಬೇಕು ಎಂದು ಸೂಚನೆಗಳನ್ನು ನೀಡಿದೆ. ಅದರಂತೆ ಪ್ರಧಾನಮಂತ್ರಿ ಆಯುಷ್ಮಾನ್ ಭಾರತ ಆರೋಗ್ಯ ಮೂಲಸೌಕರ್ಯ ಮಿಷನ್ ಅಡಿಯಲ್ಲಿ ಪ್ರತಿ ರಾಜ್ಯದಲ್ಲೂ ಕೇಂದ್ರವನ್ನು ಮಾಡಲಾಗುತ್ತಿದೆ. ಸಾಂಕ್ರಾಮಿಕ ರೋಗಗಳು, ಬೆಂಕಿ ಅವಘಡಗಳು, ಪ್ರಕೃತಿ ವಿಕೋಪ ಮುಂತಾದವುಗಳನ್ನು ಸಮರ್ಪಕವಾಗಿ ನಿರ್ವಹಿಸಲು ಈ ಆರೋಗ್ಯ ತುರ್ತು ಕಾರ್ಯಾಚರಣೆ ಕೇಂದ್ರ ನೆರವಾಗಲಿದೆ ಎಂದು ಅವರು ಹೇಳಿದರು.
ಕೇವಲ ಆರೋಗ್ಯ ಇಲಾಖೆ ಮಾತ್ರವಲ್ಲ, ತುರ್ತು ಸಂದರ್ಭಗಳಲ್ಲಿ ಕಂದಾಯ, ವಿಪತ್ತು ನಿರ್ವಹಣಾ ಪ್ರಾಧಿಕಾರ, ಪೊಲಿಸ್, ಅಗ್ನಿಶಾಮಕ ಸೇವೆ ಮುಂತಾದವುಗಳ ಸಮನ್ವಯದಿಂದ ಪರಿಸ್ಥಿತಿ ನಿರ್ವಹಿಸಲು ಇದು ಸಹಕಾರಿ ಆಗಲಿದೆ. ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಈ ಕೇಂದ್ರವು ಜಿಲ್ಲಾ ಆರೋಗ್ಯ ಸೇವೆಗಳಿಗೆ ತಕ್ಷಣ ಸಂಪರ್ಕ ಸಾಧಿಸಿ ಮಾಹಿತಿ ವಿನಿಮಯ ಮತ್ತು ಸೂಕ್ತ ನಿರ್ದೇಶನ ನೀಡಲು ನೆರವಾಗಲಿದೆ. ಒಟ್ಟಿನಲ್ಲಿ ಇದೊಂದು ಅತ್ಯಾಧುನಿಕ ಆರೋಗ್ಯ ತುರ್ತು ಪರಿಸ್ಥಿತಿ ನಿರ್ವಹಣಾ ಘಟಕವಾಗಿ ಕಾರ್ಯ ನಿರ್ವಹಿಸಲಿದೆ ಎಂದರು.
ಇದೇ ವೇಳೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯದರ್ಶಿ ರಿತ್ವಿಕ್ ರಂಜನಂ ಪಾಂಡೆ, ಆಯುಕ್ತ ಗುರುದತ್ ಹೆಗಡೆ, ಎನ್‍ಎಚ್‍ಎಂ ನಿರ್ದೇಶಕ ಅವಿನಾಶ್ ಮೆನನ್, ಆರೋಗ್ಯ ಇಲಾಖೆಯ ನಿರ್ದೇಶಕಿ ಡಾ. ರಜನಿ ಉಪಸ್ಥಿತರಿದ್ದರು.
ಭಾರತವು ಸಾಂಕ್ರಾಮಿಕ ರೋಗಗಳು ಮತ್ತು ಪ್ರಕೃತಿ ವಿಕೋಪಗಳು ಸೇರಿದಂತೆ ವಿವಿಧ ಆರೋಗ್ಯ ತುರ್ತು ಪರಿಸ್ಥಿತಿಗಳಿಗೆ ಅತೀ ಹೆಚ್ಚು ಅಪಾಯಕ್ಕೊಳಗಾಗುವ ರಾಷ್ಟ್ರವಾಗಿದೆ. ಕೋವಿಡ್-19 ಮಹಾಮಾರಿಯು ಆರೋಗ್ಯ ವ್ಯವಸ್ಥೆಯ ಮೇಲ್ವಿಚಾರಣೆ ಮತ್ತು ತ್ವರಿತ ಪ್ರತಿಕ್ರಿಯೆ ವ್ಯವಸ್ಥೆಯಲ್ಲಿದ್ದ ಅಗತ್ಯತೆಗಳನ್ನು ಎತ್ತಿ ತೋರಿಸಿತ್ತು. ಈ ಸವಾಲುಗಳನ್ನು ಎದುರಿಸಲು ಕೇಂದ್ರ ಸರಕಾರ 'ಪ್ರಧಾನಮಂತ್ರಿ ಆಯುಷ್ಮಾ ನ್ ಭಾರತ ಆರೋಗ್ಯ ಮೂಲಸೌಕರ್ಯ ಮಿಷನ್' ಅಡಿಯಲ್ಲಿ ಆರೋಗ್ಯ ತುರ್ತು ಕಾರ್ಯಾಚರಣೆ ಕೇಂದ್ರವನ್ನು ಸ್ಥಾಪಿಸಿದೆ. ಇಂತಹ ಅತ್ಯಾಧುನಿಕ ಕೇಂದ್ರವನ್ನು ಸ್ಥಾಪಿಸಿ ಕಾರ್ಯಾರಂಭಗೊಳಿಸಿರುವ ದೇಶದ ಮೊದಲ ಪ್ರಮುಖ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ.
ಕೇಂದ್ರದಲ್ಲಿ ಅತ್ಯಾಧುನಿಕ ಸೌಲಭ್ಯಗಳು: ಕೇಂದ್ರವು ಉನ್ನತ ಗುಣಮಟ್ಟದ ವೀಡಿಯೋ ವಾಲ್, ವೀಡಿಯೋ ಕಾನ್ಫರೆನ್ಸ್ ವ್ಯವಸ್ಥೆ, ಡೇಟಾ ಸರ್ವರ್, ನೆಟ್‍ವರ್ಕ್ ವ್ಯವಸ್ಥೆ ಮತ್ತು ನೈಜ-ಸಮಯದ ಡ್ಯಾಶ್‍ಬೋರ್ಡ್‍ಗಳನ್ನು ಹೊಂದಿದೆ. ತುರ್ತು ಕರೆ ನಿರ್ವಹಣೆ ಮತ್ತು ಸಂಪೂರ್ಣ ಮೇಲ್ವಿಚಾರಣೆಗೆ ಬೇಕಾದ ಎಲ್ಲ ತಾಂತ್ರಿಕ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ನಿರ್ದೇಶಕಿ ಡಾ.ರಜನಿ ತಿಳಿಸಿದರು.